ADVERTISEMENT

ರಸ್ತೆ, ಚರಂಡಿ ನಿರ್ಮಾಣಕ್ಕೆ ಪ್ರಥಮ ಆದ್ಯತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 9:50 IST
Last Updated 2 ಜನವರಿ 2012, 9:50 IST

ಚನ್ನಗಿರಿ: ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ವರ್ಗದವರ ಎಲ್ಲಾ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ನೀಡಲಾಗಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಗ್ರಾಮದ ಅಭಿವೃದ್ಧಿಗೆ ಒಟ್ಟು ರೂ 1.75 ಕೋಟಿ ಅನುದಾನವನ್ನು ನೀಡಲಾಗಿದೆ. ಹಿರೇಕೋಗಲೂರು ರೂ 35 ಲಕ್ಷ, ಗಿರಿಯಾಪುರ ರೂ  28ಲಕ್ಷ, ಬೆಳ್ಳಿಗನೂಡು ರೂ 43ಲಕ್ಷ, ಗೆದ್ದಲಹಟ್ಟಿ ರೂ 20ಲಕ್ಷ, ಮಂಗೇನಹಳ್ಳಿ ರೂ 30ಲಕ್ಷ, ತಣಿಗೆರೆ ರೂ 35ಲಕ್ಷ ಹಾಗೂ ಭೀಮನೆರೆ ಗ್ರಾಮದಲ್ಲಿ ರೂ 40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಸಮುದಾಯ ಭವನ, ಚರಂಡಿಗಳ ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಸಂತೇಬೆನ್ನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಒಟ್ಟು ರೂ 11.26 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಚನ್ನಗಿರಿ ಪಟ್ಟಣದಲ್ಲಿ ಕೆಳದಿ ಚನ್ನಮ್ಮಾಜಿ ಪ್ರತಿಮೆಗೆ ರೂ 15 ಲಕ್ಷ, ಕಾಶೀಪುರ-ಆಲೂರು ರಸ್ತೆಅಭಿವೃದ್ಧಿಗೆ ರೂ 2.20 ಕೋಟಿ, ಕೆರೆಬಿಳಚಿ ಸೇರಿದಂತೆ 12 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ ರೂ 11.40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಹಂತ ಹಂತವಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್, ತಾ.ಪಂ. ಸದಸ್ಯೆ ಅನಸೂಯಮ್ಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಪಿ. ಚಿದಾನಂದಮೂರ್ತಿ, ಸಿದ್ದೇಶ್, ಗ್ರಾ.ಪಂ. ಉಪಾಧ್ಯಕ್ಷೆ ರುದ್ರಮ್ಮ, ಆನಂದಪ್ಪ, ಶೈಲಮ್ಮ, ರುದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.