ADVERTISEMENT

ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಕ್ಕೆ ಒತ್ತಾಯ

ಚೀಲೂರು ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದಲ್ಲಿ ಸಂಸತ್ ಸದಸ್ಯ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 4:49 IST
Last Updated 2 ಜುಲೈ 2013, 4:49 IST

ಹೊನ್ನಾಳಿ: `ಕೃಷಿ, ರೈತರು ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಅನನ್ಯ' ಎಂದು ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ಚೀಲೂರು ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಸಹಕಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಾಡಿಗೇ ಅನ್ನ ನೀಡುವ ರೈತ ಇಂದು ಕಷ್ಟದಲ್ಲಿದ್ದಾನೆ. ಬರಗಾಲ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಿರುವುದು, ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆ ಹೆಚ್ಚಳ ಇತ್ಯಾದಿ ಸಮಸ್ಯೆಗಳಿಂದ ನಲುಗಿದ್ದಾನೆ. ರೈತನಿಗೆ ಕೊಂಚಮಟ್ಟಿನ ನೆಮ್ಮದಿ ದೊರೆಯುವುದು ಸಹಕಾರ ಸಂಘಗಳಿಂದ ಮಾತ್ರ. ಆ ನಿಟ್ಟಿನಲ್ಲಿ ಚೀಲೂರು ಸಂಘ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ರೈತರ ರೂ.1 ಕೋಟಿ ಮತ್ತು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರೈತರ ರೂ. 2 ಕೋಟಿ ಸಾಲ ಮನ್ನಾ ಮಾಡಿದ ಪರಿಣಾಮ ರೈತರು ಸ್ವಲ್ಪ ನೆಮ್ಮದಿ ಕಂಡರು. ಬಿಜೆಪಿ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೂ. 1ಲಕ್ಷದವರೆಗೆ ಸಾಲ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಸಾಲದ ಮೊತ್ತವನ್ನು ಹೆಚ್ಚಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಸಂಘದ ಮಾಜಿ ಅಧ್ಯಕ್ಷರು-ನಿವೃತ್ತ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಮಾತನಾಡಿ, ಸಹಕಾರ ಸಂಘಗಳ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಸಂಘಗಳು ಸಶಕ್ತವಾಗಬೇಕಾದರೆ, ಜನಪ್ರತಿನಿಧಿಗಳು, ಸಿಬ್ಬಂದಿ ಸ್ವಾರ್ಥ ರಹಿತರಾಗಿರಬೇಕು ಎಂದರು.

ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ.ವಿಶ್ವನಾಥ್ ಮಾತನಾಡಿ, ಸಹಕಾರ ಸಂಘಕ್ಕೆ ನೂರು ವರ್ಷ ತುಂಬಿರುವುದು ಖುಷಿಯ ಸಂಗತಿ. ಆದರೆ, ಸಮಾರಂಭಕ್ಕೆ ಸಹಕಾರ ಸಚಿವ ಡಾ.ಎಚ್.ಎಸ್.ಮಹದೇವ ಪ್ರಸಾದ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಗೈರು ಹಾಜರಾಗಿರುವುದರಿಂದ ಜನರು ನಿರಾಸೆಗೊಂಡಿದ್ದಾರೆ. ಸಚಿವರು ಗ್ರಾಮೀಣ ಭಾಗಗಳ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಸದಸ್ಯೆ ಅಂಬಿಕಾ ರಾಜಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ವಿಶಾಲಾಕ್ಷಮ್ಮ ಆಲ್ಬರ್ಟ್ ಮಾತನಾಡಿದರು.

ಚೀಲೂರು ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್.ಗುರುಮೂರ್ತಿ, ಎಸ್.ಪಿ.ಬಸವನಗೌಡ, ಡಿ.ಪ್ರಕಾಶ್, ಕೆ.ಎಚ್.ಷಣ್ಮುಖಪ್ಪ, ಬಿ.ಜಿ.ಬಸವರಾಜಪ್ಪ, ಪಾರ್ವತಮ್ಮ, ಡಾ.ಎಂ.ಸಿ.ಬಸವರಾಜ್, ಸಂಘದ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.