ADVERTISEMENT

ರುಮಾಲು ಬೇಡ ಎಂದ ಮುಖ್ಯಮಂತ್ರಿ

ಶಾಮನೂರು ಶಿವಶಂಕರಪ್ಪಗೆ ಕೇಕ್ ತಿನ್ನಿಸಿ ಶುಭ ಕೋರಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 9:29 IST
Last Updated 17 ಜೂನ್ 2013, 9:29 IST

ದಾವಣಗೆರೆ: ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮವು ಕೆಲವು ಸ್ವಾರಸ್ಯಕರ ಹಾಗೂ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು!

ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಮನೂರು ಶಿವಶಂಕರಪ್ಪ `ಕೇಕ್' ಕತ್ತರಿಸಿ, ಸಿದ್ದರಾಮಯ್ಯ ಅವರಿಗೆ ನೀಡಿದರು.

ಅದು ಸಣ್ಣದೊಂದು ತುಂಡಾಗಿತ್ತು. ಅದನ್ನು ಶಾಮನೂರು ಬಾಯಿಗೆ ಇಟ್ಟರು. ಸಿದ್ದರಾಮಯ್ಯ ಅವರಿಗೆ ತೃಪ್ತಿಯಾದಂತೆ ಕಾಣಿಸಲಿಲ್ಲ. ಅವರೇ ಚಾಕು ಹಿಡಿದು ದೊಡ್ಡದೊಂದು ಕೇಕ್ ತುಂಡು ಕತ್ತರಿಸಿ ಬಾಯಿಗೆ ಇಟ್ಟರು. ಆಗ ಶಾಮನೂರು ಕೂಡ ನಕ್ಕು ಸುಮ್ಮನಾದರು.

ಇನ್ನು ವೇದಿಕೆ ಮೇಲೆ ಸಿಎಂ ಆಸೀನರಾಗುತ್ತಿದಂತೆಯೇ ಪೇಟ (ರುಮಾಲು) ಕಟ್ಟಲು ಸಂಘಟಕರು ಮುಂದಾದರು. ಆಗ ನಗುಮುಖದಿಂದಲೇ ಅದನ್ನು ತಿರಸ್ಕರಿಸಿದರು. ಅ

ದನ್ನು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಗಮನಿಸಿ, ವೇದಿಕೆ ಮೇಲೆ ಆಸೀನರಾದರು. ಕೆಲವುಕ್ಷಣಗಳ ಬಳಿಕ ಬಲಭಾಗದಲ್ಲಿದ್ದ ಶಾಸಕರಾದ ಡಿ.ಜಿ.ಶಾಂತನಗೌಡ, ವಡ್ನಾಳ್ ರಾಜಣ್ಣ ಹಾಗೂ ಸಚಿವ ಮಹಾದೇವ ಪ್ರಸಾದ್‌ಗೆ ರುಮಾಲು ಕಟ್ಟಲಾಯಿತು.

ಮತ್ತೆ ಮುಖ್ಯಮಂತ್ರಿ ಬಳಿ ಬಂದಾಗ ನಯವಾಗಿಯೇ ನಿರಾಕರಿಸಿದರು. ಆಗ ಮಲ್ಲಿಕಾರ್ಜುನ್ ಪಕ್ಕದಲ್ಲಿದ್ದ ಶಾಸಕರ ಕಡೆ ನೋಡಿ ಸುಮ್ಮನಾದರು.

ಸೌಮ್ಯವಾಗಿ ಮಾತನಾಡಿದ ಮುಖ್ಯಮಂತ್ರಿ
ದಾವಣಗೆರೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಮಾತಿನ ಧಾಟಿಯಲ್ಲಿ ಬದಲಾದಂತೆ ಕಂಡರು.

ಕಾರ್ಯಕ್ರಮದ ಉದ್ದಕ್ಕೂ ಹಾಸ್ಯ ಬೆರೆಸಿ ಮಾತನಾಡಲು ಪ್ರಯತ್ನಿಸಿದರು. ಅಪ್ಪಿತಪ್ಪಿಯೂ ವಿರೋಧ ಪಕ್ಷದ ನಾಯಕರ ಟೀಕೆಗೆ ಮುಂದಾಗಲಿಲ್ಲ. ಒಮ್ಮೆ ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ `ಭ್ರಷ್ಟಾಚಾರ' ಎಂದು ವಿಷಯ ಪ್ರಸ್ತಾಪಿಸಿದರು. ಆಗ ಸಭಿಕರು `ಅವರ ಬಗ್ಗೆ ಮಾತನಾಡ ಬೇಡಿ' ಎಂಬ ಮನವಿ ಮಾಡಿದರು. ಅಷ್ಟಕ್ಕೆ ಸುಮ್ಮನಾದ ಮುಖ್ಯಮಂತ್ರಿ ಗುಟ್ಕಾ ಲಾಬಿಯ ಬಗ್ಗೆ ಮಾತನಾಡುವಾಗ ಮಾತ್ರ ವಿರೋಧ ಪಕ್ಷಗಳ ಮೇಲೆ ಬೆರಳು ಮಾಡಿ ತೋರಿಸಿದರು.

ರೈತರ ಸಾಲ ಮನ್ನಾ, ಮದ್ಯಪಾನ ನಿಷೇಧ ಮಾಡಿ ಎಂಬ ಘೋಷಣೆಗಳು ಸಭಿಕರಿಂದ ತೂರಿಬಂದವು. ವೇದಿಕೆಯ ಮೇಲಿದ್ದ ಮುಖ್ಯಮಂತ್ರಿ ಪದೇ ಪದೇ ಕೈಬೀಸುತ್ತಿದ್ದ ದೃಶ್ಯ ಕಂಡುಬಂತು.

ಇನ್ನು ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಸಿಇಒ ಎ.ಬಿ.ಹೇಮಚಂದ್ರ ಅವರು ಮುಖ್ಯಮಂತ್ರಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.