ADVERTISEMENT

ರೈತನ ನೆರವಿಗೆ ಬಂದ ಕೂರಿಗೆ ಬಿತ್ತನೆ ಯಂತ್ರಗಳು

ಎತ್ತು ಮಾರಿಕೊಂಡ ರೈತರು, ಬಿತ್ತನೆಗೂ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 9:22 IST
Last Updated 13 ಜೂನ್ 2018, 9:22 IST

‌ಮಾಯಕೊಂಡ: ಎತ್ತುಗಳು, ರೈತನ ಕೂಡಿ ದುಡಿಯುವ ಗೆಳೆಯರು ಎಂಬ ಮಾತಿತ್ತು. ಎತ್ತು ಕಟ್ಟಿಕೊಳ್ಳದ ರೈತರಿಲ್ಲದ ಕಾಲ ಹೊರಟು ಹೋಗಿ ಈಗ ಊರಿನಲ್ಲಿ ಹುಡುಕಿದರೂ ಎತ್ತು ಸಿಗದ ಸ್ಥಿತಿಯುಂಟಾಗಿದೆ. ಬರಗಾಲ, ದುಬಾರಿ ಮೇವು, ಇಕ್ಕಟ್ಟಾದ ಮನೆ ಮತ್ತಿತರೆ ಸಾಕಣಿಕೆ ಸಮಸ್ಯೆಗಳಿಂದ ರೈತರು ಎತ್ತು ಸಾಕುವುದನ್ನು ಕಡಿಮೆ ಮಾಡಿದ್ದಾರೆ. ಎತ್ತು ಹೋದ ಮೇಲೆ ಬೇಸಾಯ ಸಿಗದೇ ಬಿತ್ತನೆಗೂ ರೈತ ಪಡಿಪಾಟಲು ಪಡುವ ಸ್ಥಿತಿಯುಂಟಾಗಿದೆ.

ಎತ್ತುಗಳು ಹೆಚ್ಚಿದ್ದಾಗ ರೈತರು ಹೊಲ ಉಳುಮೆಗೆ, ಬಿತ್ತನೆಗೆ, ಫಸಲು ಸಾಗಣೆಗೂ ಎತ್ತುಗಳನ್ನೇ ಅವಲಂಭಿಸಿದ್ದರು. ಬೇಸಾಯ ಮತ್ತು ಕೂಲಿ ಆಳುಗಳ ಕೊರತೆ ಹೆಚ್ಚಾದ ನಂತರ ಬಿತ್ತನೆಗೆ ಮಾತ್ರ ಬೇಸಾಯ ಬಳಸಲಾಗುತ್ತಿತ್ತು. ಈಚೆಗೆ ರೈತರು ಎತ್ತುಗಳನ್ನು ಮಾರಾಟ ಮಾಡಿದ್ದರಿಂದ ಬೇಸಾಯಗಳೇ ಸಿಗುವುದು ದುರ್ಲಭವಾಗಿ ಪರದಾಟ ತೀವ್ರವಾಗಿದೆ.

ಬೇಸಾಯ ಒಂದಕ್ಕೆ ₹ 1,200ರಿಂದ 1500, ಕೂಲಿ ಆಳಿಗೆ  ₹ 250!

ADVERTISEMENT

ಬೇಸಾಯ ಒಂದಕ್ಕೆ ₹ 1,200ರಿಂದ 1500, ಕೂಲಿ ಆಳಿಗೆ 250ರೂ. ರವರೆಗೆ ಬೇಡಿಕೆಯುಂಟಾಗಿತ್ತು. ಬೇಸಾಯ ಮತ್ತು ಕೂಲಿ ಆಳು ಹುಡುಕಲು ವಾರವಿಡೀ ಪರದಾಡಿ ಅನ್ನದಾತ ಕಂಗಾಲಾಗಿದ್ದ. ಕಳೆದ ನಾಲ್ಕಾರು ವರ್ಷಗಳಿಂದ ದುಬಾರಿ ಬೇಸಾಯಕ್ಕೆ ಹಣ ಕೊಟ್ಟು ರೈತರು ನೊಂದಿದ್ದರು. ಟ್ರ್ಯಾಕ್ಟರ್‌ನಲ್ಲಿ ಬಿತ್ತನೆ ಮಾಡಿದರೂ ಬಿತ್ತುವ ಮತ್ತು ಸಾಲು ಮುಚ್ಚುವ ಎರಡು ಟ್ರ್ಯಾಕ್ಟರ್‌ಗಳು ಹಸಿಯಿದ್ದಾಗ ಹೊಲದಲ್ಲಿ ಕೆಲಸ ಮಾಡಿದರೆ ನೆಲ ಗಟ್ಟಿಯಾಗುತ್ತಿತ್ತು. ಟ್ರ್ಯಾಕ್ಟರ್ ಬಿತ್ತನೆಗೆ ಕೂಲಿ ಆಳುಗಳನ್ನೂ ಹೊಂದಿಸುವುದೂ ಕಷ್ಟವಾಗಿದೆ ಎನ್ನುತ್ತಾರೆ ರೈತರು.

ರೈತರ ನೆರವಿಗೆ ಬಂದ ಬಿತ್ತನೆ ಯಂತ್ರಗಳು

ಈ ವರ್ಷ ಬಿತ್ತನೆಗೆ ಸುಧಾರಿತ ಬಿತ್ತನೆ ಯಂತ್ರಗಳು ಊರೂರುಗಳಿಗೆ ಧಾವಿಸಿ ರೈತರ ಚಿಂತೆ ಕಡಿಮೆ ಮಾಡಿವೆ. ಕೊಪ್ಪಳದ ಅಣ್ಣಿಗೇರಿ ಮತ್ತು ಕೃಷಿ ಇಲಾಖೆಯ ಜೋಹ್ನ್ ಡೀರ್ ಕಂಪನಿಯ ಸುಧಾರಿತ ಬಿತ್ತನೆ ಯಂತ್ರಗಳು ರೈತರ ನೆರವಿಗೆ ಧಾವಿಸಿವೆ. ಒಂದೇ ದಿನದಲ್ಲಿ ಸಂಜೆವರೆಗೆ  20 ರಿಂದ 25 ಎಕರೆ ಬಿತ್ತಬಲ್ಲ ಯಂತ್ರಗಳು ಎತ್ತಿನ ಬೇಸಾಯದ ಅವಶ್ಯಕತೆ ಕಡಿಮೆ ಮಾಡಿವೆ. ಟ್ರ್ಯಾಕ್ಟರ್ ಚಾಲಕನೊಂದಿಗೆ ಹೊಲದ ಮಾಲಿಕ ಬೀಜ ಗೊಬ್ಬರ ತೆಗೆದುಕೊಂಡು ಹೊಲಕ್ಕೆ ಹೋದರೆ ಒಂದೆರಡು ಗಂಟೆಗಳಲ್ಲಿ 5-6 ಎಕರೆ ಬಿತ್ತನೆ ಮಾಡಬಹುದು. ಕೂಲಿ ಆಳು ಹುಡುಕುವ ಪ್ರಮೇಯವೇ ಇಲ್ಲದಂತಾಗಿದೆ ಎಂದು ರೈತರು ನೆಮ್ಮದಿಯಿಂದ ಬಿತ್ತನೆಗೆ ಮುಂದಾಗಿದ್ದಾರೆ.

ಬಿತ್ತನೆ ಸುಲಭವಾಗಿದೆ..

‘ಸಣ್ಣ ರೈತರು ಬಿತ್ತನೆ ಮಾಡುವುದೇ ಕಷ್ಟವಾಗಿತ್ತು. ಬೇಸಾಯಕ್ಕೆ ಒಂದೂವರೆ ಸಾವಿರ , ಆಳಿಗೆ ₹ 300   ಕೊಟ್ಟರೂ ಬಿತ್ತನೆಗೆ ಬೇಸಾಯ, ಕೂಲಿಯವರು ಸಿಗುತ್ತಿರಲಿಲ್ಲ. ಒಕ್ಕುಲುತನವೇ ಬೇಡವೆನಿಸುವಂತಾಗಿತ್ತು. ಬಿತ್ತನೆ ಮಾಡುವುದೇ ಬಹುಕಷ್ಟವಾಗುತ್ತಿತ್ತು,. ಕೊಪ್ಪಳದ ಮತ್ತು ಕೃಷಿ ಇಲಾಖೆಯ ಬಿತ್ತನೆ ಯಂತ್ರ ಬಂದ ಮೇಲೆ ಬಿತ್ತನೆ ಸುಲಭವಾಗಿದೆ, ಎನ್ನುತ್ತಾರೆ ಅಣ್ಣಾಪುರದ ಬಸವಂತಪ್ಪ, ಮಾಯಕೊಂಡದ ನಟರಾಜ, ಹರಿಶಂಕರ, ಶೇಖರಪ್ಪ ಮತ್ತು ಮಲ್ಲಪ್ಪ.

ರೈತರಿಗೆ ವರದಾನ

ದಾವಣಗೆರೆ ತಾಲ್ಲೂಕಿನಲ್ಲಿ 25, ಮಾಯಕೊಂಡ ರೈತ ಸಂಪರ್ಕ ಕೆಂದ್ರದಿಂದ 8 ಸೀಡ್ ಕಂ ಫರ್ಟಿಲೈಸರ್ ಡ್ರಿಲ್( ಬಿತ್ತನೆ ಕೂರಿಗೆ ಯಂತ್ರ) ಸಹಾಯಧನದಡಿ ವಿತರಿಸಲಾಗಿದೆ. ಮಾರುಕಟ್ಟೆ ಬೆಲೆ 64,400ಯಿದ್ದು, ಸಾಮಾನ್ಯ ವರ್ಗಕ್ಕೆ 28,000, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ರೈತರಿಗೆ ₹ 50,400 ರೂ ಸಹಾಯಧನ ಸೌಲಭ್ಯವಿದೆ.

ನಿಗದಿತ ಪ್ರಮಾಣದಲ್ಲಿ ಬೀಜ, ಗೊಬ್ಬರ ಬಿತ್ತನೆ ಮಾಡಬಹುದು. ಅಗತ್ಯ ಆಳಕ್ಕೆ ಬೀಜ ಬೀಳುವುದರಿಂದ ಹುಟ್ಟುವಳಿ ಸಹಜವಾಗಿ ಹೆಚ್ಚುತ್ತದೆ. ದಿನಕ್ಕೆ ಸುಮಾರು 20 ಎಕರೆ ವರೆಗೆ ಬಿತ್ತನೆ ಮಾಡಬಹುದು. ರೈತರು ಸೀಡ್ ಕಂ ಫರ್ಟಿಲೈಸರ್ ಡ್ರಿಲ್( ಬಿತ್ತನೆ ಕೂರಿಗೆ ಯಂತ್ರ) ರೈತರಿಗೆ ವರದಾನವಾಗಿದ್ದು, ಸಹಾಯಧನದಡಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಕೃಷಿ ಅಧಿಕಾರಿ ಎಂ. ಡಿ. ಶ್ರೀಧರ ಮೂರ್ತಿ.

ಜಿ.ಜಗದೀಶ, ಮಾಯಕೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.