ADVERTISEMENT

ರೈತಪರ ಕಾಳಜಿಯ ಪ್ರೊ.ನರಸಿಂಹಪ್ಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:15 IST
Last Updated 24 ಜನವರಿ 2011, 10:15 IST

ದಾವಣಗೆರೆ: ರೈತ ಮುಖಂಡ ಪ್ರೊ.ಸಿ. ನರಸಿಂಹಪ್ಪ ಅವರು ಅಪಾರ ಜ್ಞಾನವನ್ನು ಹೊಂದಿದ್ದು, ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರುವಂಥ ಸಾಮರ್ಥ್ಯ ಅವರಿಗಿದೆ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಬಣ್ಣಿಸಿದರು.ಸ್ಫೂರ್ತಿ ಸೇವಾ ಟ್ರಸ್ಟ್ ಮತ್ತು ವಿಕಾಸ ತರಂಗಿಣಿ ಸಂಸ್ಥೆ ಹಾಗೂ ಸಿ.ಎನ್. ಶಿಷ್ಯಬಳಗದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತ ಮುಖಂಡ ಪ್ರೊ.ಸಿ. ನರಸಿಂಹಪ್ಪ ಅವರ 77ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನರಸಿಂಹಪ್ಪ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದುಕೊಂಡು ಬಂದಿದ್ದೇನೆ. ಅವರ ಹೋರಾಟಗಳಲ್ಲಿ ಜತೆಯಾಗಿ ಭಾಗವಹಿಸಿದ್ದೇನೆ. ಅವರು ತಮ್ಮಲ್ಲಿನ ಹಲವಾರು ವಿಚಾರಗಳನ್ನು ನನ್ನ ಮೂಲಕ ಆಚರಣೆಗೆ ತಂದರು. ಅವರೇ ನನಗೆ ಸ್ಫೂರ್ತಿ’ ಎಂದು ಹೇಳಿದರು.ನರಸಿಂಹಪ್ಪ ಅವರು ಜೀವನವಿಡೀ ಹೋರಾಟ ಮಾಡುತ್ತಲೇ ಬಂದಿದ್ದಾರೆ. ವಿಶೇಷವಾಗಿ ರೈತರ ಬಗ್ಗೆ ಅವರಿಗೆ ಅಪಾರ ಕಾಳಜಿಯಿದೆ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ತರಲು ನರಸಿಂಹಪ್ಪ ಅವರು ಹೊರಾಟ ಮಾಡಿದ್ದಾರೆ. ಅವರಿಗಿರುವ ಜ್ಞಾನಕ್ಕೆ ಅವರು ಈ ಹಿಂದೆಯೇ ಸಂಸದರಾಗಬೇಕಿತ್ತು. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ತಾವು ಮತ್ತು ಸಚಿವ ರವೀಂದ್ರನಾಥ್ ಅವರು ಮುಖ್ಯಮಂತ್ರಿಗೆ ಮನವಿಯನ್ನೂ ಮಾಡಿದ್ದೆವು, ಅದು ಇನ್ನೂ ಈಡೇರಿಲ್ಲ ಎಂದು ಹೇಳಿದರು.

ಪ್ರೊ.ಸಿ. ನರಸಿಂಹಪ್ಪ ಮಾತನಾಡಿ, ಸಾಮೂಹಿಕ ಹೋರಾಟ ಮತ್ತು ಸಮಾನ ಮನಸ್ಕರಲ್ಲಿರುವ ಒಗ್ಗಟ್ಟು ತಾವು ಹೋರಾಟಗಳಲ್ಲಿ ಗೆಲ್ಲುವಂತೆ ಮಾಡಿದೆ ಎಂದರು.‘ನಗರವಾಣಿ’ ಪತ್ರಿಕೆ ಸಂಪಾದಕ ಸಿ. ಕೇಶವಮೂರ್ತಿ, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ರಹಮತ್ ಉಲ್ಲಾ ಮಾತನಾಡಿದರು.ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಯಕೊಂಡ ಶಾಸಕ ಬಸವರಾಜ ನಾಯ್ಕ, ಡಾ.ಸದಾಶಿವಪ್ಪ ಹಾಜರಿದ್ದರು. ಎಚ್.ಆರ್. ಲಿಂಗರಾಜ್ ಸ್ವಾಗತಿಸಿದರು. ಶಾನುಭೋಗ ನಾಗರಾಜ್ ನಿರೂಪಿಸಿದರು.

30ಕ್ಕೆ ರಕ್ತದಾನ ಶಿಬಿರ: ದಾವಣಗೆರೆಯ ಹೆಲ್ಪ್ ಡೆಸ್ಕ್ ಸಂಸ್ಥೆ ವತಿಯಿಂದ ರೆಡ್‌ಕ್ರಾಸ್ ಸೊಸೈಟಿ ಆವರಣದಲ್ಲಿ ವಾಣಿಜ್ಯೋದ್ಯಮಿ ನಲ್ಲೂರು ರಾಘವೇಂದ್ರ ಅವರ 36ನೇ ಹುಟ್ಟುಹಬ್ಬದ ಅಂಗವಾಗಿ ಜ. 30ರಂದು ಬೆಳಿಗ್ಗೆ 10ಕ್ಕೆ ಸ್ವಯಂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.