ADVERTISEMENT

ವರದಕ್ಷಿಣೆ ಪಿಡುಗು ಹೋಗಲಾಡಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 6:25 IST
Last Updated 18 ಏಪ್ರಿಲ್ 2011, 6:25 IST

ದಾವಣಗೆರೆ:  ವಧು-ವರರ ಸಮಾವೇಶದಿಂದ ವರದಕ್ಷಿಣೆ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ವರದಕ್ಷಿಣಿ ಪಿಡುಗನ್ನು ಹೋಗಲಾಡಿಸಲು ವೀರಶೈವ ಸಮಾಜ ಬಾಂಧವರು ಬದ್ಧರಾಗಬೇಕು ಎಂದು ವೀರಶೈವ ಪಂಚಮಸಾಲಿ ಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.ನಗರದ ಸದ್ಯೋಜಾತ ಹಿರೇಮಠದಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ವಧು- ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
 

ವರದಕ್ಷಿಣೆ ನೀಡುವುದರಿಂದ ತಮ್ಮ ಮಕ್ಕಳನ್ನು ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸಿದಂತಾಗುತ್ತದೆ. ಈ ನಾಡಿಗೆ ಆದರ್ಶ ಎಂದು ಕರೆಸಿಕೊಂಡಿರುವ ಪಂಚಮಸಾಲಿ ಸಮಾಜ ಇಂದು ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಅದರ್ಶವಾಗಿದೆ ಎಂದರು.ಇಂಟರ್‌ನೆಟ್‌ನಲ್ಲಿ ಹುಡುಕಿ, ನೋಡಿ ಮದುವೆಯಾಗುವುದಕ್ಕಿಂತ ಇಂತಹ ಸಮಾವೇಶಗಳ ಮೂಲಕ ಸಂಬಂಧ   ಬೆಸೆದು  ಗಟ್ಟಿಗೊಳಿಸಬೇಕು. ಜತೆಗೆ, ಜೀವನ ಪರಿವರ್ತನೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.
 

ವಧು-ವರರ ಸಮಾವೇಶಗಳ ಮೂಲಕ ನೂತನ ದಂಪತಿ ಆದರ್ಶವಾದರೆ, ಅವರ ಮಕ್ಕಳು ಆದರ್ಶರಾಗಿ ನಾಡಿಗೆ ಬರುತ್ತಾರೆ. ಸಾಮಾಜಿಕ ಬಾಂಧವ್ಯ ಉತ್ತಮಗೊಳಿಸಿ ಜನರಲ್ಲಿ ಸಂಸ್ಕಾರ ಉಳಿಯಲಿ ಎನ್ನುವ ಉದ್ದೇಶದಿಂದ ಇಂತಹ ಸಮಾವೇಶಗಳು ನಿರಂತರ ನಡೆಯುತ್ತಿದೆ ಎಂದರು.
 

ADVERTISEMENT

ಹರಿಹರದಲ್ಲಿ ಭವ್ಯವಾದ ಪಂಚಮಸಾಲಿ ಗುರುಪೀಠ, ಸುಂದರವಾದ ದೇವಾಲಯ ನಿರ್ಮಾಣವಾಗುತ್ತಿದೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಅನಾಥ ಮಕ್ಕಳ ವಸತಿಶಾಲೆ, ನಿರಂತರ ಸಂಪರ್ಕ ಕೇಂದ್ರ ಮುಂತಾದ ಸೌಲಭ್ಯಗಳು ಶ್ರೀಪೀಠದಲ್ಲಿ ದೊರೆಯುತ್ತವೆ ಎಂದು ಅವರು ವಿವರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.