ಮಾಯಕೊಂಡ: ಹಣ ಮತ್ತು ಚಿನ್ನಕ್ಕಾಗಿ ಇತಿಹಾಸವನ್ನು ಭಂಗಪಡಿಸುವ ಕಾರ್ಯ ನಡೆಯುತ್ತಿರುವುದು ದುರದೃಷ್ಟಕರ ಎಂದು ಶಿವಮೂರ್ತಿ ಮುರುಘಾ ಶರಣರು ವಿಷಾದಿಸಿದರು. ಈಚೆಗೆ ಕಿಡಿಗೇಡಿಗಳಿಂದ ಭಗ್ನಗೊಂಡ ಇಲ್ಲಿನ ಹಿರೇ ಮದಕರಿ ನಾಯಕರ ಸಮಾಧಿಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.
ವಾಮಾಚಾರ ಈಚೆಗೆ ಸಮಾಜದ ಎಲ್ಲಾ ರಂಗಗಳಲ್ಲಿ ಇಣುಕಿದೆ. ಸಮಾಜದ ಶಾಂತಿ ಸಾಮರಸ್ಯ ಕದಡುತ್ತಿದೆ ಎಂಬುವ ಆತಂಕ ಜನರನ್ನು ಕಾಡಿದೆ. ಭಯ ಹುಟ್ಟಿಸುವ ಉದ್ದೇಶದಿಂದ ಇಂಥ ವಾಮಾಚಾರ ಮಾಡಲಾಗುತ್ತಿದೆ. ಸಮಾಜದ ಪ್ರತಿಯೊಬ್ಬರೂ ವಾಮಾಚಾರ ಖಂಡಿಸಬೇಕು.
ನಿಧಿ ಆಸೆಗಾಗಿ ದಾರ್ಶನಿಕರ ಗದ್ದುಗೆಗಳಿಗೆ ಅಪಚಾರ ಎಸಗುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ. ಮದಕರಿ ವಂಶಕ್ಕೂ ಮತ್ತು ಶ್ರೀ ಮಠಕ್ಕೂ ಇತಿಹಾಸದಿಂದ ಅವಿನಾಭಾವ ಸಂಬಂಧವಿದೆ. ಈ ಘಟನೆಯಿಂದ ತಮಗೆ ತೀವ್ರ ನೋವಾಗಿದೆ. ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರವಹಿಸಬೇಕಿದೆ. ಶೀಘ್ರ ಕಿಡಿಗೇಡಿಗಳ ಪತ್ತೆಹಚ್ಚಿ ಶಿಕ್ಷಿಸಬೇಕು ಎಂದರು. ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರಸ್ವಾಮೀಜಿ ಮತ್ತು ದಾವಣಗೆರೆಯ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ ನೇತೃತ್ವವಹಿಸಿದ್ದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜಪ್ಪ, ಮಾಜಿ ಅಧ್ಯಕ್ಷ ಮಾದಪ್ಪ, ಸದಸ್ಯರಾದ ಅಶೋಕ, ಮಂಜುನಾಥ ಸ್ವಾಮಿ, ರೇವಣ್ಣ, ಎಪಿಎಂಸಿ ಸದಸ್ಯರಾದ ರಾಜೇಂದ್ರ, ಜಯಪ್ರಕಾಶ್, ಮದಕರಿ ನಾಯಕ ಸಮಾಧಿ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಸುನಿಲ್, ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳಾದ ರಾಜಶೇಖರ್ ಸಂಡೂರು, ಗುರುನಾಥ್, ಲೋಕೇಶ್, ಉಮಾಶಂಕರ್, ರೇವಣಸಿದ್ದಪ್ಪ, ರವಿ, ಗ್ರಾಮದ ಮುಖಂಡರಾದ ಲಕ್ಷ್ಮಣ್, ರುದ್ರೇಶ್, ಮುರಿಗೇಶ್, ಗಂಗಾಧರಪ್ಪ, ಪರ್ತಕರ್ತ ಮಲ್ಲೇಶ್ ಇದ್ದರು.
ನ. 8ರಂದು ಪ್ರತಿಭಟನೆ: ಇಲ್ಲಿನ ಹಿರೇ ಮದಕರಿ ನಾಯಕರ ಸಮಾಧಿ ಭಗ್ನಗೊಳಿಸಿದ ಘಟನೆ ಖಂಡಿಸಿ ನ.8ರಂದು ಮಾಯಕೊಂಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಾಧಿ ಆವರಣದಲ್ಲಿ ಭಾನುವಾರ ನಡೆದ ಗ್ರಾಮದ ಮುಖಂಡರ ಮತ್ತು ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜಪ್ಪ, ಎಪಿಎಂಸಿ ಸದಸ್ಯ ಜಯಪ್ರಕಾಶ್, ಜೀರ್ಣೋದ್ದಾರ ಟ್ರಸ್ಟ್ ಅಧ್ಯಕ್ಷ ಸುನಿಲ್ ಮಾತನಾಡಿ, ಗ್ರಾಮದ ಹಿರಿಮೆಯ ಸಂಕೇತವಾದ ಹಿರೇ ಮದಕರಿ ಸಮಾಧಿ ಭಗ್ನಗೊಳಿಸಿರುವುದು ಅತ್ಯಂತ ನೋವಿನ ಸಂಗತಿ. ನಾಡನಾಳಿದ ಮದಕರಿ ನಾಯಕರನ್ನು ಜಾತಿಗೆ ಸೀಮಿತ ಗೊಳಿಸುವ ಯತ್ನ ಸಲ್ಲದು. ಕುಕೃತ್ಯಕ್ಕೆ ಕಾರಣರಾದವರ ಬಂಧನಕ್ಕೆ ಮತ್ತು ಸಮಾಧಿ ಜೀರ್ಣೋದ್ಧಾರಕ್ಕೆ ಆಗ್ರಹಿಸಿ, ನ.8ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು.
ರಾಜಸಾಹೇಬರ ದರ್ಗಾದಿಂದ ಹೊರಟು ಮದಕರಿ ನಾಯಕರ ಸಮಾಧಿ ಬಳಿ ಸಮಾವೇಶ ನಡೆಸಿ, ಉಪ ತಹಶೀಲ್ದಾರರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಎಲ್ಲಾ ಸಮಾಜದ ಮುಖಂಡರು, ಸಂಘ -ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲು ಕೋರಿದರು.
ಎಪಿಎಂಸಿ ಸದಸ್ಯ ರಾಜೇಂದ್ರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಾದಪ್ಪ, ಸದಸ್ಯರಾದ ಮಂಜುನಾಥ ಸ್ವಾಮಿ, ರೇವಣ್ಣ, ರೈತ ಮುಖಂಡ ಮಲ್ಲಾಪುರದ ದೇವರಾಜ್, ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.