ADVERTISEMENT

ವಾಲ್ವ್ ಸೋರಿಕೆಯ ನೀರು-ಇವರ ಪಾಲಿಗೆ ಪಂಚಾಮೃತ!

​ಪ್ರಜಾವಾಣಿ ವಾರ್ತೆ
Published 4 ಮೇ 2012, 7:40 IST
Last Updated 4 ಮೇ 2012, 7:40 IST
ವಾಲ್ವ್ ಸೋರಿಕೆಯ ನೀರು-ಇವರ ಪಾಲಿಗೆ ಪಂಚಾಮೃತ!
ವಾಲ್ವ್ ಸೋರಿಕೆಯ ನೀರು-ಇವರ ಪಾಲಿಗೆ ಪಂಚಾಮೃತ!   

ಹರಪನಹಳ್ಳಿ: ಪುರಸಭೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಉದಾಸೀನತೆ ಹಾಗೂ ನಿರ್ವಹಣೆಯ ವೈಫಲ್ಯದಿಂದಾಗಿ ಪೈಪ್‌ಲೈನ್ ಏರ್‌ವಾಲ್ವ್‌ನಲ್ಲಿ ಸೋರಿಕೆಯಾಗಿ ಚರಂಡಿಗೆ ಸೇರುತ್ತಿರುವ ನೀರು ಪಟ್ಟಣದ ನಾಲ್ಕಾರು ಬಡಾವಣೆಯ ನಿವಾಸಿಗಳ ಪಾಲಿಗೆ ಪಂಚಾಮೃತವಾಗಿದೆ!

ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿದರೆ, ಪಟ್ಟಣಕ್ಕೆ ತುಂಗಭದ್ರಾ ನೀರು ಪೂರೈಕೆಯಾಗುತ್ತಿರುವ ಪರಿಣಾಮ ನೀರಿನ ಸಮಸ್ಯೆ ಇಲ್ಲ. ಆದರೂ, ನಿರ್ವಹಣೆಯಲ್ಲಿನ ನ್ಯೂನತೆಯಿಂದ ಪಟ್ಟಣದ ಗುಂಡಿನಕೇರಿ, ಕೊರವರಕೇರಿ, ಚಲುವಾದಿಕೇರಿ ಸೇರಿದಂತೆ ನಾಲ್ಕಾರು ಬಡಾವಣೆಯ 400ಕ್ಕೂ ಮನೆಗಳ ನಿವಾಸಿಗಳ ಬಾಯಾರಿಕೆಯ ದಾಹ ತೀರುತ್ತಿಲ್ಲ!.

ಬೀಡಿ ಹಾಗೂ ಕಟ್ಟಡ ಕಾರ್ಮಿಕರು, ಕಲ್ಲು ಕ್ವಾರಿಯಲಿ ಜೀವನ ಸವೆಸುತ್ತಿರುವ ಬಹುತೇಕ ಬಡ ಹಾಗೂ ನಿರ್ಗತಿಕ ಪರಿಶಿಷ್ಟ ಕುಟುಂಬಗಳೇ ವಾಸಿಸುತ್ತಿರುವ ಈ ಬಡಾವಣೆಯ ನಿವಾಸಿಗಳು ಕಳೆದ ಮೂರ‌್ನಾಲ್ಕು ವರ್ಷಗಳಿಂದ ವರ್ಷದ ಎಲ್ಲಾ ದಿನಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಪುರಸಭೆ ಹಾಗೂ ಜಲಮಂಡಳಿ ಅಲ್ಲಲ್ಲಿ ಅಳವಡಿಸಿರುವ ಸಾರ್ವಜನಿಕ ನಳಗಳಲ್ಲಿ ನೀರು ಹರಿಯುವುದೇ ಇಲ್ಲ. ಪೈಪ್‌ಲೈನ್ ಮಾರ್ಗದಲ್ಲಿ ಅಷ್ಟಿಷ್ಟು ಪೂರೈಕೆಯಾಗುವ ನೀರು, ಉಳ್ಳವರು ಖಾಸಗಿ ನಳಗಳಿಗೆ ಅಳವಡಿಸಿರುವ ಮೋಟಾರ್‌ಗಳು ನುಂಗಿ ಹಾಕುತ್ತಿರುವ ಪರಿಣಾಮ ಬೀದಿ ನಳಗಳು ಹನಿ ನೀರಿಲ್ಲದೇ ತುಕ್ಕು ಹಿಡಿದಿವೆ.

ತೋಟಗಾರಿಕೆ ಇಲಾಖೆ ಕಚೇರಿಯ ಸಮೀಪ ಪಟ್ಟಣದ ಅರ್ಧ ಭಾಗದಷ್ಟು ಬಡಾವಣೆಗಳ ಕೊಚ್ಚೆನೀರು ಹರಿದು ಹೋಗಲು ನಿರ್ಮಿಸಿರುವ ಬೃಹತ್ ಚರಂಡಿಗೆ ಹೊಂದಿಕೊಂಡಂತೆ ಪೈಪ್‌ಲೈನ್ ಮಾರ್ಗದ ಸುರಕ್ಷಿತೆಗಾಗಿ ಏರ್‌ವಾಲ್ವ್ ಒಂದನ್ನು ಅಳವಡಿಸಲಾಗಿದೆ.

ನೀರು ಸರಬರಾಜುಗೊಳ್ಳುವ ಸಂದರ್ಭದಲ್ಲಿ ಈ ವಾಲ್ವ್‌ನಲ್ಲಿ ಸೋರಿಕೆಯಾಗುತ್ತಿರುವ ನೀರಿಗೆ ಸ್ಥಳೀಯರು ಪೈಪ್ ಜೋಡಿಸಿಕೊಂಡು, ಕೊಚ್ಚೆನೀರಿನಲ್ಲಿಯೇ ಕೊಡ ಹಿಡಿದು ನೀರು ಸಂಗ್ರಹಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಉಂಟಾಗಿದೆ.

ವಾರ್ಡ್ ಪ್ರತಿನಿಧಿಸುತ್ತಿರುವ ಜನಪ್ರತಿನಿಧಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಾಗಲಿ ಜನಸಾಮಾನ್ಯರ ಗೋಳು ತಾಕದಿರುವುದು ಪುರಸಭೆಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.