ADVERTISEMENT

ವಿಫಲ ಅಲ್ಲ; ಇದು ಆರಂಭಿಕ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:40 IST
Last Updated 20 ಮಾರ್ಚ್ 2012, 5:40 IST

ದಾವಣಗೆರೆ: ಜಿಲ್ಲಾಡಳಿತಕ್ಕೆ ದುರ್ಗಾಂಬಿಕಾ ಜಾತ್ರೆಯಲ್ಲಿ ಕೋಣನ ಬಲಿ ನಿಷೇಧ ವಿಫಲ ಆಗಿರಬಹುದು. ಆದರೆ, ದೇವಸ್ಥಾನದಲ್ಲಿ ನಡೆಯದಂತೆ ತಡೆಗಟ್ಟಲು ಯಶಸ್ವಿ ಆಗಿದೆ. ಇದು ಆರಂಭಿಕ ಗೆಲುವು. ಹೀಗೆ ಹತ್ತಾರು ಹೆಜ್ಜೆ ನಡೆದರೆ ಸಂಪೂರ್ಣ ಪ್ರಾಣಿಬಲಿ ನಿಷೇಧ ಸಾಧ್ಯ ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ `ಪ್ರಾಣಿಬಲಿ ನಿಷೇಧ- ಪರಾಮರ್ಶೆ~ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟಕ್ಕೆ ಇಳಿಯುವುದು ಬೆಂಕಿ ಮೇಲಿನ ನಡಿಗೆ ಇದ್ದಂತೆ. ಇದು ಅಸಾಧ್ಯ ಎಂದು ತಿಳಿಯದೆ ಮುಂದೆ ಸಾಗಬೇಕು. ಎಂತಹ ಕಷ್ಟಗಳು ಬಂದರೂ ಸರಿ ಮೆಟ್ಟಿ ನಿಲ್ಲಬೇಕು. ಜನರು ಮಾತಿನಲ್ಲಿ ಶೂರರಾಗದೆ ಕಾರ್ಯರೂಪಕ್ಕೆ ತರುವಂತರಾಗಬೇಕು. ದೃಢ ನಿರ್ಧಾರ ತೆಗೆದುಕೊಳ್ಳಬೇಕು.
ಕಾನೂನಿನ ಮತ್ತು ಆತ್ಮಬಲ ಹೆಚ್ಚಿದಾಗ ಅನಿಷ್ಠಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಮಾತನಾಡಿ, ಜಿಲ್ಲಾಡಳಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಕಾರ ಪಡೆದು ಪ್ರಾಣಿಬಲಿ  ನಿಷೇಧದಲ್ಲಿ ಯಶಸ್ವಿ ಆಗಿದೆ. ಸಿಸಿ ಕ್ಯಾಮೆರಾಗಳಲ್ಲಿ ದೊರೆತ ಮಾಹಿತಿಯಂತೆ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ನೀಲಗುಂದ ಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಾಧೀಶರು ಕಾಣಿಕೆಗಾಗಿ ರಾಜಕಾರಣಿಗಳ ಕಾರ್ಯಕ್ರಮಗಳಿಗೆ ತೆರಳದೆ ಪ್ರಾಣಿಬಲಿ ನಿಷೇಧಕ್ಕೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಬಸವಪ್ರಭು ಸ್ವಾಮೀಜಿ, ಗುರುಬಸವ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರೊ.ಎಸ್.ಎಚ್. ಪಟೇಲ್, ಪ್ರೊ.ಬಿ.ವಿ. ವೀರಭದ್ರಪ್ಪ, ಡಾ.ಬಿ.ಟಿ. ಅಚ್ಯುತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್, ಡಾ.ಕೆ. ಹರೀಶ್, ಡಿವೈಎಸ್‌ಪಿ ಚಂದ್ರಪ್ಪ, ಶಿವನಕೆರೆ ಬಸವಲಿಂಗಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.