ADVERTISEMENT

ವಿವಿಧತೆಯಲ್ಲಿ ಏಕತೆ: ಭಾರತದ ಹೆಮ್ಮೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 8:30 IST
Last Updated 27 ಜನವರಿ 2012, 8:30 IST

ಹೊನ್ನಾಳಿ: ವಿವಿಧತೆಯಲ್ಲಿ ಏಕತೆ ಸಾಧಿಸಿದ ಭಾರತ ಇಡೀ ಜಗತ್ತಿಗೇ ಮಾದರಿಯಾಗಿ ಮುನ್ನಡೆಯುತ್ತಿರುವುದಕ್ಕೆ ನಾವೆಲ್ಲಾ ಹೆಮ್ಮೆಪಡಬೇಕು ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಳುಹಿಸಿದ ಸಂದೇಶ ವನ್ನು ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ವಾಚಿಸಿದರು.
 ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ  ಆಲ್ಬರ್ಟ್ ಮಾತನಾಡಿ, ನಾಡಿನ ಏಕತೆ ಮತ್ತು ಸಮಗ್ರತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆಯಿತ್ತರು.

ಪ.ಪಂ. ಅಧ್ಯಕ್ಷ ಚಾಟಿ ಶೇಖರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಜಾತ್ಯತೀತ ರಾಷ್ಟ್ರವಾದರೂ ಕೂಡ ಇತ್ತೀಚಿನ ದಿನಗಳಲ್ಲಿ ಜಾತೀಯತೆಯ ಭೂತ ನಮ್ಮನ್ನೆಲ್ಲಾ ಆವರಿಸಿಕೊಂಡಿದೆ. ಜಾತೀಯತೆ ತೊಲಗಬೇಕಾದರೆ ರಾಜಕಾರಣಿಗಳು ಜಾತಿ ರಾಜಕಾರಣಕ್ಕೆ ಇತಿಶ್ರಿ ಹಾಡಬೇಕು ಎಂದರು.
ಸಿಪಿಐ ಎಂ.ಎನ್. ರುದ್ರಪ್ಪ ಇತರರು ಮಾತನಾಡಿದರು. ತಾ.ಪಂ. ಸದಸ್ಯೆ ಪ್ರಭಾವತಿ ಜುಂಜಾನಾಯ್ಕ, ಪ.ಪಂ. ಸದಸ್ಯೆ ಮಂಜುಳಾ ಮಂಜಪ್ಪ, ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊರಾರ್ಜಿ ದೇಸಾಯಿ ವಸತಿಶಾಲೆಯ ಮಕ್ಕಳು ಪ್ರಾರ್ಥಿಸಿದರು. ಕೆ.ಸಿ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಶಂಕರಪ್ಪ ಮತ್ತು ರವಿ ಗಾಳಿ ಕಾರ್ಯಕ್ರಮ ನಿರೂಪಿಸಿದರು.
ಜಗಳೂರು ವರದಿ
ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರಸಕ್ತ ವರ್ಷ ನೂರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 18 ಸಾವಿರ ಎಕರೆಗೆ  ನೀರು ಹರಿದುಬರಲಿದ್ದು, ಸಮಗ್ರ ನೀರಾವರಿಗೆ ಒತ್ತಾಯಿಸಲಾಗಿದೆ. ಈ ಮಧ್ಯೆ ಜ. 30ರಂದು `ಪಟ್ಟಣ ಬಂದ್~ಗೆ ಕರೆ ನೀಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಫೆಬ್ರುವರಿ ತಿಂಗಳಲ್ಲಿ ತಾಲ್ಲೂಕಿಗೆ ಭೇಟಿ ನೀಡುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಬಗ್ಗೆ ಘೋಷಣೆಯನ್ನೂ ಮಾಡುವ ಭರವಸೆ ನೀಡಿದ್ದಾರೆ ಎಂದು ರಾಮಚಂದ್ರ ಸ್ಪಷ್ಟಪಡಿಸಿದರು.

ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ನಿಗಮದ ಅಧ್ಯಕ್ಷ ಟಿ. ಗುರುಸಿದ್ದನಗೌಡ ಅವರು ಮಾತನಾಡಿದರು.
 ತಹಶೀಲ್ದಾರ್ ಎಚ್.ಪಿ. ನಾಗರಾಜ್ ಅವರು ರಾಜಕೀಯ ಭಾಷಣ ಮಾಡುತ್ತಾ, ತಾವು ಅಧಿಕಾರಿ ಎನ್ನುವುದನ್ನೇ ಮರೆತಿದ್ದಾರೆ ಎಂದು ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯ ಎಚ್. ನಾಗರಾಜ್, ಪ.ಪಂ. ಅಧ್ಯಕ್ಷೆ ನಾಗರತ್ನಮ್ಮ, ತಾ.ಪಂ. ಅಧ್ಯಕ್ಷ ಶಾಂತವೀರಪ್ಪ, ಸದಸ್ಯರಾದ ಬಿ.ಆರ್. ಅಂಜಿನಪ್ಪ, ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ರೇವಣಸಿದ್ದಪ್ಪ, ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್, ಬಿಜೆಪಿ ಅಧ್ಯಕ್ಷ ಎಸ್.ಕೆ. ಮಂಜುನಾಥ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.