ADVERTISEMENT

ವೈಜ್ಞಾನಿಕ ಪರಿಹಾರ ನೀಡಲು ಒತ್ತಾಯ

ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 5:13 IST
Last Updated 23 ಸೆಪ್ಟೆಂಬರ್ 2013, 5:13 IST

ಹರಪನಹಳ್ಳಿ: ಹರಿಹರ– ಕೊಟ್ಟೂರು ರೈಲ್ವೆ ಮಾರ್ಗ ಅಳವಡಿಸಲು ಸ್ವಾಧೀನ ಪಡಿಸಿಕೊಂಡಿರುವ ಕೃಷಿ ಭೂಮಿಗೆ ಪರಿಹಾರ ನೀಡುವಲ್ಲಿ ಇಲಾಖೆ ತಾರತಮ್ಯ ನೀತಿ ಅನುಸರಿಸಿದೆ. ಸ್ವಾಧೀನ ಪಡಿಸಿಕೊಂಡ ಜಮೀನಿಗೆ ತಕ್ಷಣ ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘದ ರಾಜ್ಯಘಟಕದ ಅಧ್ಯಕ್ಷ ಎಚ್‌.ಎಂ. ಮಹೇಶ್ವರಸ್ವಾಮಿ ಒತ್ತಾಯಿಸಿದರು.

ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಭಾನುವಾರ ಸಂಘದ ಗ್ರಾಮಶಾಖೆಯನ್ನು ಉದ್ಘಾಟಿಸಿ, ನಂತರ ನಡೆದ ರೈತ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಅವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಿದ್ದಾರೆ. ಕೆಲವೆಡೆ ಪ್ರತಿ ಎಕರೆಗೆ ` ೮ರಿಂದ೧೦ಲಕ್ಷ ಪರಿಹಾರ ಪಾವತಿ ಮಾಡಿದ್ದಾರೆ. ಆದರೆ, ಕೆಲವು ಭಾಗದಲ್ಲಿನ ಜಮೀನಿಗೆ ಕೇವಲ `೧೫ರಿಂದ ೨೦ಸಾವಿರ ನಿಗದಿಪಡಿಸಿ ಪಾವತಿಸಿದ್ದಾರೆ. ಇದು ರೈತರಿಗೆ ಮಾಡುವ ವಂಚನೆ, ತಾರತಮ್ಯ ಮಾಡಿದಂತಾಗಿದೆ ಎಂದು ಆರೋಪಿಸಿದರು.

ಭೂಪರಿಹಾರ ತಾರತಮ್ಯ ಧೋರಣೆಯನ್ನು ಕೂಡಲೇ ಸರಿಪಡಿಸಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಏಕ ರೂಪದ ಪರಿಹಾರ ಪಾವತಿಸಬೇಕು. ಇಲ್ಲವಾದಲ್ಲಿ ರೈಲ್ವೆ ಮಾರ್ಗದಲ್ಲಿ ಕುಳಿತು ಪ್ರತಿಭಟನೆ ನಡೆಸಬೇಕಾಗುತ್ತದೆ.

ಕಂಪೆನಿ ನಿಷೇಧಕ್ಕೆ ಆಗ್ರಹ:  ದುಗ್ಗಾವತಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ರೈತರಿಗೆ ಕಳಪೆ ಬಿತ್ತನೆ ಬೀಜ ಪೂರೈಸಿದ ಮಹಿಕೋ ಕಂಪೆನಿಯನ್ನು ನಿಷೇಧಿಸಬೇಕು. ಹತ್ತಿ ಬಿತ್ತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಪ್ರತಿ ಎಕರೆಗೆ ` 2ಲಕ್ಷ ಪರಿಹಾರ ನೀಡಬೇಕು. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ, ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಬೂದಿಹಾಳ್‌ ಸಿದ್ದೇಶಪ್ಪ, ಮಲ್ಲಿಕಾರ್ಜುನಸ್ವಾಮಿ, ಎ.ಪಿ.ವಾಗೀಶ್‌, ಜಯದೇವ, ಸಿದ್ದಲಿಂಗಸ್ವಾಮಿ, ನಾಗರಾಜ, ಎನ್‌.ಮಂಜುನಾಥ, ಎಚ್‌.ಅಂಜಿನಪ್ಪ, ಡಿ.ಪಿ. ಚಿದಂಬರರಾವ್‌, ಶಂಕರರಾವ್‌, ಬಿ. ನಾಗರಾಜ, ಎಚ್‌. ಗುಡ್ಡಪ್ಪ, ಇಮಾಮ್‌ ಸಾಹೇಬ್‌, ಹಲುವಾಗಲು ಶಿವರಾಜ, ಮಾಚಿಹಳ್ಳಿ ನವೀನ್‌, ಮಾರುತಿ, ಕಲ್ಲಹಳ್ಳಿ ಗೋಣೆಪ್ಪ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.