ADVERTISEMENT

ವೈದ್ಯರು ಹಳ್ಳಿಗಳತ್ತ ದೃಷ್ಟಿ ಹರಿಸಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:15 IST
Last Updated 25 ಫೆಬ್ರುವರಿ 2012, 5:15 IST

ದಾವಣಗೆರೆ: ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಸಮುದಾಯದತ್ತ ದೃಷ್ಟಿ ಹರಿಸಬೇಕು. ಗ್ರಾಮೀಣ ಜನರ ಸೇವೆ ಮಾಡುವ ಸಂಕಲ್ಪ ತೊಡಬೇಕು ಎಂದು ಬೆಳಗಾವಿ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಕಾಂತ್ ಕೊಕಾಟೆ ಕರೆ ನೀಡಿದರು.

ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರ ಇಂದು ವ್ಯವಹಾರ ಎನ್ನುವಂತೆ ಆಗಿದೆ. ಅಂತಹ ಮನೋಭಾವ ಹೋಗಲಾಡಿಸಬೇಕು. ವೈದ್ಯಕೀಯ ಕ್ಷೇತ್ರ ಎಂದರೆ ಸೇವಾಮನೋಭಾವ ಎನ್ನುವುದನ್ನು ಕಿರಿಯ ವೈದ್ಯರು ಅರ್ಥ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದರೂ, ಮಾತೃಭಾಷೆಯ ಬಗೆಗಿನ ಪ್ರೀತಿ ತೊರೆಯಬಾರದು ಎಂದು ಕಿವಿಮಾತು ಹೇಳಿದರು.

ಆದಿವಾಸಿಗಳು, ಬುಡಕಟ್ಟು ಜನರು, ಕೊಳೆಗೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ವೈದ್ಯರು ನಮ್ಮ ಮಧ್ಯೆ ಇದ್ದಾರೆ. ಅಂತಹ ವೈದ್ಯರ ಸೇವೆ, ತ್ಯಾಗ ನಮಗೆ ಆದರ್ಶವಾಗಬೇಕು. ದಟ್ಟ ಮಳೆಕಾಡುಗಳಲ್ಲಿ ಗ್ರಾಮೀಣ ಪ್ರದೇಶ ತಲುಪಲು ಸಾಧ್ಯವಾಗದಂತಹ ಭಾಗಗಳಲ್ಲೂ ಯಶಸ್ವಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವ ವೈದ್ಯರ ಬದುಕು ನಮ್ಮದೂ ಆಗಬೇಕು ಎಂದರು.

ವಿಶ್ವದಲ್ಲಿ ಇಂದು ವೈದ್ಯಕೀಯ ಕ್ಷೇತ್ರ ಸಾಕಷ್ಟು ಬೆಳೆದಿದೆ. 335 ವೈದ್ಯಕೀಯ ಕಾಲೇಜು ಭಾರತದ್ಲ್ಲಲಿವೆ. ಪ್ರತಿ ವರ್ಷ 40 ಸಾವಿರ ವೈದ್ಯರು ಸೃಷ್ಟಿಯಾಗುತ್ತಾರೆ. ಆದರೆ, ಭಾರತದಲ್ಲಿ ವೈದ್ಯಕೀಯ ಸೇವೆ ಇಂದಿಗೂ ಸಮರ್ಪಕವಾಗಿಲ್ಲ. ನಕಲಿ ಔಷಧ ಮಾರಾಟ ಜಾಲಗಳು ಭಾರತ, ಚೀನದಂತಹ ದೇಶಗಳಲ್ಲಿ ಹೆಚ್ಚಿದೆ. ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಔಷಧಗಳನ್ನು ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.

ರಾಜ್ಯವೂ ಸೇರಿದಂತೆ ಅನೇಕ ಭಾಗಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿ ತಲುಪಿರುವುದು ಕಳವಳಕಾರಿ ವಿಚಾರ. ನಮ್ಮ ಪ್ರತಿಭೆಯ ಜತೆಗೆ, ನಡವಳಿಕೆಗಳೂ ಬದಲಾಗಬೇಕಾದ ಅಗತ್ಯವಿದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರಸಕ್ತ ವರ್ಷ ಕಾಲೇಜಿಗೆ ಶೇ. 92ರಷ್ಟು ಫಲಿತಾಂಶ ಬಂದಿದೆ. ಅದಕ್ಕೆ ಇಲ್ಲಿನ ಉತ್ತಮ ಉಪನ್ಯಾಸಕರೇ ಕಾರಣ ಎಂದು ಶ್ಲಾಘಿಸಿದರು.

 ಕಾಲೇಜಿನ ಪ್ರಾಂಶುಪಾಲ ಡಾ.ಪಿ. ನಾಗರಾಜ್, ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಪಿ. ಕೃಷ್ಣಮೂರ್ತಿ, ಡಾ.ಕಾಳಪ್ಪನವರ್, ಡಾ.ಅರುಣ್‌ಕುಮಾರ್, ಡಾ.ಉಮಾಕಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.