ADVERTISEMENT

ವೈದ್ಯರ ಸೇವೆ ಪ್ರಾಮಾಣಿಕವಾಗಿರಲಿ: ಎಸ್ಸೆಸ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:20 IST
Last Updated 23 ಸೆಪ್ಟೆಂಬರ್ 2011, 6:20 IST

ದಾವಣಗೆರೆ: `ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು~ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ನವೀಕೃತ `ಶಿವಪಾರ್ವತಿ~ ನವಜಾತ ಶಿಶು ವಿಭಾಗ (ಎನ್‌ಐಸಿಯು)ದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಪೂಜಿ ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗೆ ಇಂದು ಅತ್ಯಂತ ಸಂತಸದ ದಿನ. ರೂ 3 ಕೋಟಿ ವೆಚ್ಚದಲ್ಲಿ ಮಕ್ಕಳ ವಿಭಾಗವನ್ನು ನವೀಕರಿಸಲಾಗಿದೆ. ರಾಜ್ಯದ ಯಾವುದೇ ಮಕ್ಕಳ ಆಸ್ಪತ್ರೆಯಲ್ಲಿ ದೊರೆಯದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲಿದೆ.

50 ಇಂಟೆನ್ಸಿವ್ ಕೇರ್ ಸೌಲಭ್ಯ ಸೇರಿದಂತೆ ಮಕ್ಕಳ ಜೀವರಕ್ಷಣೆಗೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಬ್ರೆಜಿಲ್‌ನಿಂದ ತರಿಸಲಾಗಿದೆ. ಯಾವುದೇ ಮಗು ಇಲ್ಲಿ ದಾಖಲಾದಾಗ ಚಿಕಿತ್ಸೆಗಾಗಿ ಇತರ ಆಸ್ಪತ್ರೆಯನ್ನು ಅವಲಂಬಿಸದಿರಲಿ ಎನ್ನುವ ಉದ್ದೇಶದಿಂದ ವಿಭಾಗವನ್ನು ನವೀಕರಣಗೊಳಿಸಲಾಗಿದೆ ಎಂದು ವಿವರಿಸಿದರು.

ದಾವಣಗೆರೆ ಸೇರಿದಂತೆ ಸುತ್ತಮುತ್ತಲ 8-10 ಜಿಲ್ಲೆಗಳ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಲೆಂದು ಬಾಪೂಜಿ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈಗಾಗಲೇ ಎಂಆರ್‌ಐ, ರೇಡಿಯೋಲಾಜಿ ವಿಭಾಗವನ್ನು ರೂ 6ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ರೋಗಿಗಳಿಗೆ ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.

ಶೀಘ್ರದಲ್ಲೇ ಪಿಐಸಿಯು (ಪೋಸ್ಟ್‌ನೇಟಲ್ ತೀವ್ರ ನಿಗಾ ಘಟಕ) ಆರಂಭಿಸಲಾಗುವುದು. ಇದಕ್ಕೆ ಬೇಕಾದ ಉಪಕರಣ ಮತ್ತು ಸೌಲಭ್ಯದ ಕುರಿತು ವೈದ್ಯರು ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸಿದಲ್ಲಿ. ಆ ಕೇಂದ್ರವನ್ನೂ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಎನ್‌ಐಸಿಯು ಅತ್ಯಾಧುನಿಕ ಸೌಲಭ್ಯಗಳಿಂದ ನವೀಕರಣಗೊಂಡಿದೆ. ದಾವಣಗೆರೆಯಂತಹ ಪ್ರದೇಶಗಳಲ್ಲಿ ಇಂತಹ ವಿಭಾಗದ ಆವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕೇಂದ್ರದ ಕಾರ್ಯ ಶ್ಲಾಘನೀಯ.

ವೈದ್ಯರು ಖಾಸಗಿ ಪ್ರಾಕ್ಟೀಸ್ ಬಿಟ್ಟು, ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸಿ ರೋಗಿಗಳಿಗೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.ಡಾ.ಜಿ. ಗುರುಪ್ರಸಾದ್ ವಿಭಾಗದ ಪರಿಚಯ ಮಾಡಿಕೊಟ್ಟರು. ಕೇಂದ್ರದ ಕಾರ್ಯ ಕುರಿತ ಸಿ.ಡಿ.ಯನ್ನು ಡಾ.ನಿರ್ಮಲಾ ಕೇಸರಿ ಬಿಡುಗಡೆ ಮಾಡಿದರು.

ಕಾಸಲ್ ಎಸ್. ವಿಠ್ಠಲ್, ಎ.ಎಸ್. ವೀರಣ್ಣ, ಎ.ಸಿ. ಜಯಣ್ಣ, ಆರ್. ರಮಾನಂದ, ಬ್ರೆಜಿಲ್‌ನ ಡಾ.ಕರೇನ್, ಡಾ.ಸಿಸಿರೋ, ಮಕ್ಕಳ ವಿಭಾಗ ತಜ್ಞವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಸಿಯಾನಿ ಪ್ರಾರ್ಥಿಸಿದರು. ಜೆಜೆಎಂಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಆರ್. ಚಂದ್ರಶೇಖರ ಸ್ವಾಗತಿಸಿದರು. ಡಾ.ಪಿ.ಎಸ್. ಸುರೇಶ್‌ಬಾಬು ಕಾರ್ಯಕ್ರಮ ನಿರೂಪಿಸಿದರು. ಡಾ.ಸಿ.ಆರ್. ಬಾಣಾಪುರಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.