ADVERTISEMENT

ಶಾಸಕರಿಂದ ಕಮಿಷನ್‌: ರೇಣುಕಾಚಾರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:26 IST
Last Updated 23 ಅಕ್ಟೋಬರ್ 2017, 6:26 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ಹೊನ್ನಾಳಿ: ‘ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿಗಳಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಶೇ 5ರಷ್ಟು ಕಮಿಷನ್ ಪಡೆಯುತ್ತಾರೆ. ಹಣ ಮಾಡುವುದೇ ಅವರ ದಂಧೆಯಾಗಿದೆ’ ಎಂದು ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

‘ಶಾಸಕರು ಗುತ್ತಿಗೆದಾರರು ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ನೇರವಾಗಿ ಕಮಿಷನ್‌ ಪಡೆಯುತ್ತಿದ್ದಾರೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

‘ಜಿಲ್ಲೆಯ ಬಾತಿ ಗ್ರಾಮದ ರೈಸ್ ಮಿಲ್ ಮಾಲೀಕರೊಬ್ಬರು ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಜೈಲಿನಲ್ಲಿದ್ದಾರೆ. ಅದೇ ರೀತಿ ಶಾಂತನಗೌಡರು ತಮ್ಮ ‘ಶಂಕರ್ ರೈಸ್ ಮಿಲ್‌’ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಅಕ್ರಮವಾಗಿದೆ ಎಂದು ಪ್ರಕರಣ ದಾಖಲಾಗಿದೆ’ ಎಂದು ರೇಣುಕಾಚಾರ್ಯ ಆರೋಪಿಸಿದರು.

ADVERTISEMENT

ಮಾಮೂಲಿ ವಸೂಲಿ: ‘ಶಾಸಕರು ತಾಲ್ಲೂಕಿನ ಎಲ್ಲಾ ವೈನ್‌ ಶಾಪ್‌ಗಳಿಂದ ಮಾಮೂಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿವರವಾಗಿ ಹೇಳುತ್ತೇನೆ. ಇಂಥ ಶಾಸಕರಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ’ ಎಂದು ಅವರು ತಿರುಗೇಟು ನೀಡಿದರು.

‘ನನ್ನ ಎಂಟು ವರ್ಷಗಳ ಆಡಳಿತದಲ್ಲಿ ತಾಲ್ಲೂಕಿಗೆ ಎಷ್ಟು ಅನುದಾನ ತಂದಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಶಾಂತನಗೌಡರು ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂದು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ.ರಾಜಪ್ಪ, ಕಾರ್ಯದರ್ಶಿ ಅರಕರೆ ನಾಗರಾಜ್, ಕೆ.ಪಿ. ಕುಬೇರಪ್ಪ, ಯುವ ಮೋರ್ಚಾ ಅಧ್ಯಕ್ಷ ಸಿ.ಆರ್.ಶಿವಾನಂದ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಜ್, ಮುಖಂಡರಾದ ದಿಡಗೂರು ಫಾಲಾಕ್ಷಪ್ಪ, ಕಸಬಾ ಸೊಸೈಟಿ ಅಧ್ಯಕ್ಷ ಬಾಬು, ಕೃಷ್ಣಮೂರ್ತಿ, ಪ್ರೇಮ್‌ಕುಮಾರ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.