ADVERTISEMENT

ಶಿಕ್ಷಣದಿಂದ ಅನಿಷ್ಟ ಪದ್ಧತಿ ನಿರ್ಮೂಲನೆ

ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಾಬಪ್ಪ ಬಿ.ಮೇಲಗಲ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:03 IST
Last Updated 29 ಮಾರ್ಚ್ 2018, 10:03 IST
ಕಾರ್ಯವನ್ನು ಉದ್ಘಾಟಿಸಿದ ನ್ಯಾ.ಸಾಬಪ್ಪ ಬಿ.ಮೇಲಗಲ್‌, ಕುಮಾರ್‌ ಹನುಮಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಬಸವಂತಪ್ಪ, ಡಿಎಚ್‌ಒ ಡಾ.ಎಂ.ಎಸ್‌. ತ್ರಿಪುಲಾಂಬ,ಡಿ.ಜಿ. ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯವನ್ನು ಉದ್ಘಾಟಿಸಿದ ನ್ಯಾ.ಸಾಬಪ್ಪ ಬಿ.ಮೇಲಗಲ್‌, ಕುಮಾರ್‌ ಹನುಮಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಬಸವಂತಪ್ಪ, ಡಿಎಚ್‌ಒ ಡಾ.ಎಂ.ಎಸ್‌. ತ್ರಿಪುಲಾಂಬ,ಡಿ.ಜಿ. ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.   

ದಾವಣಗೆರೆ: ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಟ ಪದ್ಧತಿಗಳು ಜೀವಂತವಾಗಿದ್ದು, ಅವುಗಳ ನಿರ್ಮೂಲನೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಸಾಬಪ್ಪ ಬಿ.ಮೇಲಗಲ್‌ ಹೇಳಿದರು.

ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಸರ್ಕಾರದ ವಿವಿಧ ಇಲಾಖೆಗಳು
ಈಗಾಗಲೇ ಸಾಕಷ್ಟು ಜಾಗೃತಿ ಶಿಬಿರಗಳನ್ನು ನಡೆಸಿವೆ. ಆದರೂ ಇಂದಿಗೂ ಕೆಲವೆಡೆ ಜೀವಂತವಾಗಿವೆ. ಇದಕ್ಕೆ ಬಡತನ, ಅನಕ್ಷರತೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರತಿ ಹಳ್ಳಿಗಳಲ್ಲಿನ ಕುಟುಂಬಗಳ ಸಂಪರ್ಕದಲ್ಲಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.

ಪ್ರತಿ ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರವು ಉಚಿತ ಹಾಗೂ ಕಡ್ಡಾಯ ಶಿಕ್ಷಣ ನಿಯಮ ಜಾರಿಗೊಳಿಸಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಆಶಾ ಕಾರ್ಯಕರ್ತೆಯರ ಮೇಲಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ‘ಅನಕ್ಷರತೆ, ಬಡತನ, ಪರಿಸರ ಮತ್ತು ಕೌಟುಂಬಿಕ ಕಲಹಗಳು ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣಗಳು. ಇವುಗಳ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಕಾಯ್ದೆ ಬಗ್ಗೆ ಪೋಷಕರಿಗೆ ತಿಳಿ ಹೇಳಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಬಸವಂತಪ್ಪ, ಡಿಎಚ್‌ಒ ಡಾ.ಎಂ.ಎಸ್‌. ತ್ರಿಪುಲಾಂಬ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕುಮಾರ್ ಹುನುಮಂತಪ್ಪ ಅವರೂ ಇದ್ದರು.

ಡಾನ್‌ ಬಾಸ್ಕೋ ಸಂಸ್ಥೆಯ ಮಕ್ಕಳು ಪ್ರಾರ್ಥಿಸಿದರು. ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಈ.ಎಸ್. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.