ADVERTISEMENT

ಸಂಗೇನಹಳ್ಳಿ ಕೆರೆಗೆ ಭದ್ರಾ ಕಾಲುವೆ ನೀರು ಹರಿಸಿ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:25 IST
Last Updated 27 ಅಕ್ಟೋಬರ್ 2017, 6:25 IST

ಜಗಳೂರು: ಬೆಳಗಟ್ಟದ ಮಾರ್ಗವಾಗಿ ತಾಲ್ಲೂಕಿನ ಸಂಗೇನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಶಾಖಾ ಕಾಲುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಮುಸ್ಟೂರಿನ ಓಂಕಾರೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮಸ್ಥರು ಇಲ್ಲಿನ ಮಿನಿ ವಿಧಾಸನೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಳಗಟ್ಟದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಸಂಗೇನಹಳ್ಳಿ ಕೆರೆಗೆ ಭದ್ರಾ ನೀರು ಹರಿಸಬೇಕು. ಸಂಗೇನಹಳ್ಳಿ ಕೆರೆಯಿಂದ ಲಿಫ್ಟ್ ಮೂಲಕ ತಾಲ್ಲೂಕಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಸ್ಟೂರಿನ ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಮಾತನಾಡಿ, ‘ಹಲವು ದಶಕಗಳ ಹೋರಾಟದ ಫಲವಾಗಿ ಜಗಳೂರು ತಾಲ್ಲೂಕು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಆದರೆ, ಈ ಹಂತದಲ್ಲಿ ಏಕಾಏಕಿ ಶಾಖಾ ಕಾಲುವೆಯ ಮಾರ್ಗವನ್ನು  48 ಕಿ.ಮೀ ದೂರದ ಕಾತ್ರಾಳ್‌, ಮುದ್ದಾಪುರ ಮಾರ್ಗಕ್ಕೆ ಬದಲಿಸಲು ಹೊರಟಿರುವುದು ಅನ್ಯಾಯ. ಕಾಲುವೆಯನ್ನು ದೂರದಲ್ಲಿ ನಿರ್ಮಿಸುವುದರಿಂದ ಕೊನೆ ಪ್ರದೇಶಕ್ಕೆ ನೀರು ಹರಿದು ಬರಲು ಸಾಧ್ಯವಿಲ್ಲ. ಮಾರ್ಗ ಬದಲಾವಣೆ ಆದರೆ ನೀರಾವರಿ ಯೋಜನೆ ಕನಸು ಕನಸಾಗಿಯೇ ಉಳಿಯಲಿದೆ’ ಎಂದು ಆಕ್ಷೇಪಿಸಿದರು.

ADVERTISEMENT

ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿಗೆ ನೀರಾವರಿ ಒಳಗೊಂಡಂತೆ ಮಹತ್ವದ ಯೋಜನೆಗಳು ಕೈತಪ್ಪಿ ಹೋಗಿವೆ. ಆರೇಳು ದಶಕಗಳಿಂದ ತಾಲ್ಲೂಕಿಗೆ ಸಾಕಷ್ಟು ತಾರತಮ್ಯ ಮಾಡಲಾಗಿದೆ. ಈಗ ಭದ್ರಾ ಮೇಲ್ದಂಡೆ ಜಾರಿ ಹಂತದಲ್ಲಿರುವಾಗ ಮೂಲ ಯೋಜನೆಯನ್ನು ತಿರುಚಲು ಯತ್ನಿಸುತ್ತಿರುವುದರ ಹಿಂದೆ ವ್ಯವಸ್ಥಿತ ಹುನ್ನಾರ ಅಡಗಿದೆ. ಹಿಂದುಳಿದ ಪ್ರದೇಶದ ಅಭಿವೃದ್ಧಿಯ ಸಲುವಾಗಿ ಎಷ್ಟೇ ವೆಚ್ಚವಾದರೂ ಯೋಜನೆ ಜಾರಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಗೇನಹಳ್ಳಿ ಕೆರೆಗೆ ನೀರು ಹರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕೆಂಚಮ್ಮ, ಅಂಜಿನಪ್ಪ, ನಿಂಗರಾಜ್‌, ಎಸ್‌.ಎನ್. ತಿಪ್ಪೇಸ್ವಾಮಿ, ವಿರೂಪಾಕ್ಷ, ತಿಪ್ಪೇಸ್ವಾಮಿ, ಮುಸ್ಟೂರಪ್ಪ ನೇತೃತ್ವ ವಹಿಸಿದ್ದರು. ಉದ್ದೇಶಿತ ಕಾಲುವೆಯ ಮಾರ್ಗ ಬದಲಾಯಿಸಲು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎರಡು ದಿನಗಳಿಂದ ಸರದಿಯಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘ–ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಬೇಡಿಕೆ ಈಡೇರುವವರೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ನೀರಾವರಿ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.