ADVERTISEMENT

ಸದಾ ಕೆಟ್ಟು ನಿಲ್ಲುವ ದೋಣಿಯ ಕಿರಿಕಿರಿ

ಎಚ್.ವಿ.ನಟರಾಜ್
Published 19 ಫೆಬ್ರುವರಿ 2012, 5:00 IST
Last Updated 19 ಫೆಬ್ರುವರಿ 2012, 5:00 IST

ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯೆನಿಸಿರುವ ಸೂಳೆಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಪ್ರವಾಸಿಗರಿಗಾಗಿ ದೋಣಿವಿಹಾರ ನಡೆಸಲು ಎರಡು ದೋಣಿಗಳು ಬಂದಿದ್ದು, ಸದಾ ಕೆಟ್ಟು ನಿಲ್ಲುವ ದೋಣಿಗಳಿಂದ ದೋಣಿವಿಹಾರ ಮಾಡಲು ಬರುವ ಪ್ರವಾಸಿಗರಿತೆ ತುಂಬಾ ಕಿರಿಕಿರಿಯಾಗಿದೆ.

`ಹೋದೆಯಾ ಪಿಶಾಚಿ ಎಂದರೆ, ಬಂದೆನು ಗವಾಕ್ಷಿಲಿ~ ಎನ್ನುವ ಪರಿಸ್ಥಿತಿ ಇಲ್ಲಿವ ಪ್ರವಾಸಿಗರಿಗೆ ಬಂದೊದಗಿದೆ.
ಈಗಾಗಲೇ ಸೂಳೆಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ರೂ  5 ಕೋಟಿ ಅನುದಾನ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಿಡುಗಡೆಯಾಗಿದೆ. ಇದರಲ್ಲಿ ರೂ1.62 ಕೋಟಿ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲಾಗಿದೆ.

ಆದರೆ, ಉದ್ಘಾಟನೆಗೊಂಡು ಒಂದು ವರ್ಷ ಕಳೆಯುತ್ತಾ ಬಂದರೂ ಈ ಯಾತ್ರಿನಿವಾಸದಲ್ಲಿ ಹೋಟೇಲ್‌ನ್ನು ಪ್ರಾರಂಭಿಸಿರುವುದಿಲ್ಲ. ಹಾಗೆಯೇ, ಇಲ್ಲಿನ ವಸತಿಗೃಹಗಳಲ್ಲಿ ಉಳಿದುಕೊಳ್ಳಲು ಯಾವುದೇ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇನ್ನು ಬಸವರಾಜಪುರ ಗ್ರಾಮದ ಬಳಿ ನಿರ್ಮಾಣಗೊಳ್ಳುತ್ತಿರುವ ದೋಣಿವಿಹಾರ ಕೇಂದ್ರದ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷವಾದರೂ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಇದರಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಇಲಾಖೆ ವಿಫಲತೆ ಎದ್ದು ಕಾಣುತ್ತದೆ.

ದೋಣಿವಿಹಾರಕ್ಕಾಗಿ ಎರಡು ದೋಣಿಗಳು ಬಂದು ಸುಮಾರು ಎಂಟು ತಿಂಗಳಾದ ಮೇಲೆ ನೀರಿಗೆ ಇಳಿದಿವೆ. ಇದಕ್ಕೂ ಮುನ್ನಾ ಈ ಎರಡು ದೋಣಿಗಳು ತ್ಯಾವಣಿಗೆ ಗ್ರಾಮದ ನೀರಾವರಿ ಇಲಾಖೆಯ ಆವರಣದಲ್ಲಿ ಬಿಸಿಲು, ಮಳೆಗೆ ಸಿಕ್ಕು ನಲುಗಿ ಹೋಗಿವೆ. ಇನ್ನು ಇದರಲ್ಲಿ ಒಂದು ದೋಣಿ ಸಂಪೂರ್ಣವಾಗಿ ಕೆಟ್ಟು ಮೂಲೆ ಸೇರಿದೆ. ಇನ್ನೊಂದು ದೋಣಿ ಯಾವಾಗ ಚಾಲನೆಗೊಳ್ಳುತ್ತದೆ, ಯಾವಾಗ ಕೆಟ್ಟು ನಿಲ್ಲುತ್ತದೆ ಎಂದು ತಿಳಿಯದಂತಾಗಿದೆ.
 

ಇನ್ನು ಪ್ರವಾಸಿಗರು ಈ ದೋಣಿಯನ್ನು ಹತ್ತಿ ಚಾಲನೆಗೊಳ್ಳಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಕೆಲವೊಮ್ಮೆ ದೋಣಿ ಚಾಲನೆಗೊಳ್ಳದೇ ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂದು ಕೆಟ್ಟಿರುವ ದೋಣಿಯ ಬಗ್ಗೆ ಶಪಿಸುತ್ತಾ ಹೋಗುತ್ತಾರೆ.

ಶತಮಾನಗಳ ಇತಿಹಾಸ ಇರುವ ಈ ಸೂಳೆಕೆರೆಗೆ ದೋಣಿಗಳು ಬಂದವಲ್ಲ ಎಂಬ ಸಂತಸ ಉಳಿದಂತೆ ಆಗಿದೆ. ಈ ದೋಣಿಗಳಲ್ಲಿ ವಿಹಾರ ಮಾಡಬೇಕೆಂದು ತಾಲ್ಲೂಕಿನ ಜನರ ಆಶಯಕ್ಕೆ ಕೆಟ್ಟು ನಿಲ್ಲುವ ದೋಣಿಗಳಿಂದ ರಸಭಂಗವಾಗಿದೆ. ಈ ಸೂಳೆಕೆರೆಯನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಬೇಕಾದರೆ ಮೊದಲು ಈ ಕೆಟ್ಟು ನಿಲ್ಲುವ ದೋಣಿಗಳನ್ನು ಬದಲಾಯಿಸಿ ಸದಾ ಓಡುವ ದೋಣಿಗಳನ್ನು ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಾಗಿದೆ.
 

ಇಲ್ಲದಿದ್ದರೆ ದೂರದ ಪ್ರದೇಶಗಳಿಂದ ಬಂದ ಪ್ರವಾಸಿಗರು ಈ ತಾಲ್ಲೂಕಿನ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಗೊಣಗಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಪ್ರವಾಸಿಗರಾದ ಶಿವಮೊಗ್ಗದ ಮೇಘರಾಜ್, ಚಂದ್ರಕಲಾ, ಶಿವಕುಮಾರ್.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.