ADVERTISEMENT

ಸಮೀಕ್ಷಾ ವರದಿಗೆ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 6:25 IST
Last Updated 13 ಏಪ್ರಿಲ್ 2012, 6:25 IST

ಹರಪನಹಳ್ಳಿ: ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 150ಎಕರೆಗೂ ಅಧಿಕ ವಿಸ್ತೀರ್ಣದ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಪರಿಹಾರ ವಿತರಣೆಗಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳು ಸಲ್ಲಿಸಿದ ಸಮೀಕ್ಷಾ ವರದಿ ಅಧಿಕಾರಿಗಳ ದುರ್ವರ್ತನೆ ಹಾಗೂ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸ್ಥಳೀಯ ತೋಟಗಾರಿಕೆ ಇಲಾಖಾಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ತಾಲ್ಲೂಕಿನ ಮಾದಿಹಳ್ಳಿ, ಹೊಸಕೋಟೆ ಹಾಗೂ ಕೆರೆಗುಡಿಹಳ್ಳಿ ಗ್ರಾಮಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಜಗಳೂರು ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಅವರೊಂದಿಗೆ ಭೇಟಿ ನೀಡಿ, ಹಾನಿಯ ವೀಕ್ಷಣೆ ನಡೆಸಿದ ಬಳಿಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಕಳೆದ ಭಾನುವಾರ ಮಧ್ಯಾಹ್ನ ಸುರಿದ ಬಿರುಗಾಳಿಸಹಿತ ಮಳೆಗೆ ತಾಲ್ಲೂಕಿನ 22ಹೆಕ್ಟೇರ್ ವಿರ್ಸ್ತೀಣದ ಬಾಳೆ ತೋಟ ಸೇರಿದಂತೆ ಜಿಲ್ಲೆಯಲ್ಲಿ 150ಕ್ಕೂ ಅಧಿಕ ಫಸಲುಭರಿತ ಹಾಗೂ ಕಟಾವಿನ ಹಂತದಲ್ಲಿದ್ದ ಬಾಳೆತೋಟಗಳು ಸಂಪೂರ್ಣ ಹಾನಿಗೊಳಗಾಗಿವೆ. ಪ್ರಕೃತಿ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ಶೇ. 50ಕ್ಕೂ ಮೇಲ್ಪಟ್ಟು ಬೆಳೆಹಾನಿಯಾಗಿದ್ದರೆ ಮಾತ್ರ ಪರಿಹಾರ ವಿತರಣೆಗೆ ಅವಕಾಶ ಇದೆ. ಇದನ್ನೇ ನೆಪಮಾಡಿಕೊಂಡ ಸ್ಥಳೀಯ ಅಧಿಕಾರಿಗಳು ಶೇ. 50ಕ್ಕಿಂತ ಒಳಗೆ ಹಾನಿಗೀಡಾಗಿವೆ ಎಂದು ವರದಿ ಸಲ್ಲಿಸಿ, ರೈತರ ಪರಿಹಾರದ ಮೇಲೂ ಚಪ್ಪಡಿಕಲ್ಲು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಹಾಜರಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜಪ್ಪ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಸಂಸತ್ ಸದಸ್ಯರು `ಏನಯ್ಯ ನೀನೇನು ರೈತರ ಮಗನಾ? ಇಲ್ಲಾ, ಅಧಿಕಾರಿ ಮಗನಾ?...

ಎಲ್ಲೋ ಕುತ್ಕೊಂಡು ವರದಿ ತಯಾರಿಸಬೇಡಿ. ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿ ನೀವು ಕೊಡೋ ್ಙ 3ಸಾವಿರ (ಪ್ರತಿ ಹೆಕ್ಟೇರ್‌ಗೆ) ಗಾಳಿಗೆ ಬಿದ್ದಿರೋ ಬಾಳೆದಿಂಡು ಹೊರಹಾಕಲಿಕ್ಕೆ ಕೂಲಿಗೂ ಸಾಲೋಲ್ಲ. ರೈತರಿಗೆ ಆಸರೆಯಾಗಲಿ, ಒಪ್ಪತ್ತಿನ ಗಂಜಿಗಾದ್ರೂ ಆಗ್ಲಿ ಅಂಥ ಸರ್ಕಾರ ಕೊಟ್ರೆ, ನೀವು ಶೇ. 50ಕ್ಕಿಂತ ಕಡಿಮೆ ಹಾನಿಯಾಗಿದೆ ಎಂದು ವರದಿ ಕೊಡುತ್ತೀರಿ~ ಎಂದು ರೇಗಿದರು.

ಬಳಿಕ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಜತೆ ಮಾತನಾಡಿದ ಸಿದ್ದೇಶ್ವರ, `ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಅಸಡ್ಯತನದಿಂದ ವರದಿ ತಯಾರಿಸಿದ್ದಾರೆ. ಕೂಡಲೇ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಹಾನಿಗೀಡಾದ ಎಲ್ಲಾ ರೈತರಿಗೂ ತಕ್ಷಣವೇ ಪರಿಹಾರ ವಿತರಿಸಲು ತಹಶೀಲ್ದಾರ್‌ಗೆ ನಿರ್ದೇಶನ ನೀಡಿ~ ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ಹಾನಿಗೀಡಾದ ರೈತರಿಗೆ ವೈಯಕ್ತಿಕ ್ಙ 5ಸಾವಿರ ನಗದು ಪರಿಹಾರ ವಿತರಿಸಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಹಾನಿಗೀಡಾದ ಸಂತ್ರಸ್ತ ಕುಟುಂಬಗಳಿಗೆ ವಿತರಿಸುತ್ತಿರುವ ಪರಿಹಾರ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ವಿಷಾದಿಸಿದ ಅವರು, ಯಾವ ವರ್ಷದಲ್ಲಿ ಈ ಮೊತ್ತದ ಪರಿಹಾರ ನಿಗದಿಪಡಿಸಲಾಯಿತು.
 
ಯಾವ ಮಾನದಂಡದ ಆಧಾರದ ಮೇಲೆ ನಿಗದಿಪಡಿಸಲಾಗಿದೆ? ಇದರಿಂದ ಹಾನಿಗೊಳಗಾದ ರೈತರು ಬದುಕು ಪುನಶ್ಚೇತನಗೊಳಿಸಲು ಸಾಧ್ಯವಾ? ಇತ್ಯಾದಿ ಅಂಶಗಳ ಕುರಿತು ಬರುವ ಸಂಸತ್ ಅಧಿವೇಶದಲ್ಲಿ ಪ್ರಸ್ತಾಪ ಮಾಡುತ್ತೇನೆ. ಹಾನಿಗೀಡಾದ ಕುಟುಂಬಗಳು ಪರಿಹಾರದಿಂದ ಯತಾಸ್ಥಿತಿಗೆ ಮರಳಿಸಲು ಸಾಧ್ಯವಾಗುವಷ್ಟು ಪರಿಹಾರದ ಮೊತ್ತ ನಿಗದಿಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.