ADVERTISEMENT

ಸಾಮೂಹಿಕ ಶೌಚಾಲಯದಲ್ಲಿ ಅಂಗನವಾಡಿ ಕೇಂದ್ರ

ಜಗಳೂರು: ₹ 80 ಸಾವಿರ ವೆಚ್ಚದಲ್ಲಿ ದುರಸ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 5:04 IST
Last Updated 19 ಜೂನ್ 2017, 5:04 IST
ಜಗಳೂರಿನ ಜೆಸಿಆರ್‌ ಬಡಾವಣೆಯಲ್ಲಿ ಸಾಮೂಹಿಕ ಶೌಚಾಲಯವನ್ನು ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲಾಗಿದೆ
ಜಗಳೂರಿನ ಜೆಸಿಆರ್‌ ಬಡಾವಣೆಯಲ್ಲಿ ಸಾಮೂಹಿಕ ಶೌಚಾಲಯವನ್ನು ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲಾಗಿದೆ   

ಜಗಳೂರು: ಅಂಗನವಾಡಿ ಕೇಂದ್ರಗಳಿಗೆ  ಸ್ವಂತ ಕಟ್ಟಡದ  ತೀವ್ರ ಸಮಸ್ಯೆ ಇದ್ದು, ಸಾಮೂಹಿಕ ಶೌಚಾಲಯದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ.

ಪಟ್ಟಣದ ಜೆಸಿಆರ್‌ ಬಡಾವಣೆಯಲ್ಲಿ ಬಳಕೆಯಾಗದೆ ಉಳಿದಿದ್ದ ಸಾಮೂಹಿಕ ಶೌಚಾಲಯ ಕಟ್ಟಡವನ್ನೇ ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲಾಗಿದೆ.
ಇದಕ್ಕೆ₹ 80 ಸಾವಿರ ಖರ್ಚು ಮಾಡಲಾಗಿದೆ.

ಈ ಪ್ರದೇಶದಲ್ಲಿ ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ನಿರ್ವಹಿಸಲಾಗುತ್ತಿತ್ತು. ಹೆಚ್ಚಿನ ಮಕ್ಕಳಿಗೆ ಸ್ಥಳಾವಕಾಶದ ಕೊರತೆ ಇತ್ತು. ವ್ಯವಸ್ಥಿತ ಬಾಡಿಗೆ ಕಟ್ಟಡವೂ ಸಿಕ್ಕಿರಲಿಲ್ಲ.

ADVERTISEMENT

ಪಟ್ಟಣದ ಜೆಸಿಆರ್‌ ಬಡಾವಣೆಯ ಪೊಲೀಸ್‌ ವಸತಿಗೃಹಗಳ ಸಮೀಪ ಪಟ್ಟಣ ಪಂಚಾಯ್ತಿಯಿಂದ ಕೆಲವು ವರ್ಷಗಳ ಹಿಂದೆ ₹ 12 ಲಕ್ಷ ವೆಚ್ಚದಲ್ಲಿ  ನಿರ್ಮಿಸಲಾಗಿದ್ದ ಸಾಮೂಹಿಕ ಶೌಚಾಲಯ ಕಟ್ಟಡ ಖಾಲಿ ಇತ್ತು. 

ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸದಸ್ಯರು ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜೆಸಿಆರ್‌ ಬಡಾವಣೆಯ ನಾಗರಿಕರೊಂದಿಗೆ ಚರ್ಚಿಸಿದ ನಂತರ   ಶೌಚಾಲಯ ಕಟ್ಟಡ  ಅಂಗನವಾಡಿ  ಕೇಂದ್ರವಾಗಿ ಬದಲಾಗಿದೆ.

‘ಶೌಚಾಲಯದ ಉದ್ದೇಶಕ್ಕೆ ನಿರ್ಮಿಸಲಾಗಿದ್ದ ಕಟ್ಟಡವನ್ನು ಸೂಕ್ಷ್ಮವಾಗಿ ಶುಚಿಗೊಳಿಸಲಾಗಿದೆ. ಅಡ್ಡಗೋಡೆಗಳನ್ನು ಒಡೆದು ಹಾಕಿ ವಿಶಾಲವಾದ ಹಾಲ್‌ ಮತ್ತು  ಮಕ್ಕಳು ವಿಶ್ರಾಂತಿಗೆ, ಅಡಿಗೆ ಮನೆಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಶಾಂತಮ್ಮ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಈ ಕೇಂದ್ರದಲ್ಲಿ ಆರು ತಿಂಗಳಿಂದ ಮೂರು ವರ್ಷದವರೆಗಿನ 48 ಮಕ್ಕಳು ಹಾಗೂ  ಮೂರು ವರ್ಷ ಮೇಲ್ಪಟ್ಟ 23 ಮಕ್ಕಳು, ಗರ್ಭಿಣಿ ಮತ್ತು  ಬಾಣಂತಿ
ಯರು ಸೇರಿ ಒಟ್ಟು 99 ಫಲಾನುಭವಿಗಳು ಇದ್ದಾರೆ. ಕೇಂದ್ರ ಸುಗಮವಾಗಿ ನಡೆಯುತ್ತಿದೆ’ ಎಂದು ಹೇಳುತ್ತಾರೆ.

ಪಟ್ಟಣದಲ್ಲಿ ಒಟ್ಟು 18 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಒಂಬತ್ತು ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ ಒಂಬತ್ತು ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ.

ಪಟ್ಟಣ ಪಂಚಾಯ್ತಿಯಿಂದ ₹ 60 ಲಕ್ಷ ವೆಚ್ಚದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಐದು ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಬಳಕೆಯಾಗದೆ ಎಲ್ಲಾ ಕಟ್ಟಗಳು ಪಾಳು ಬಿದ್ದಿವೆ.

ಹೊರಕೆರೆ ಜಿಡ್ಡಿ ಮತ್ತು ಜಾಮಿಯಾ ಮಸೀದಿ ಸಮೀಪ ಎರಡು ಸಾಮೂಹಿಕ ಶೌಚಾಲಯಗಳನ್ನು ಅಂಗನವಾಡಿ ಕೇಂದ್ರವಾಗಿ ಪರಿವರ್ತಿಸಲು ಅವಕಾಶ ನೀಡುವಂತೆ ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಸಿಡಿಪಿಒ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.