ADVERTISEMENT

ಸಿಎಂ ಮನೆ ಮುತ್ತಿಗೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:04 IST
Last Updated 2 ಸೆಪ್ಟೆಂಬರ್ 2013, 5:04 IST

ಹರಪನಹಳ್ಳಿ: ಹೈದರಾಬಾದ್- ಕರ್ನಾಟಕ ಭಾಗದ ಆರು ಜಿಲ್ಲೆಗಳ ವ್ಯಾಪ್ತಿಗೆ ಅನ್ವಯ ಆಗುವಂತೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮೂಲಕ ಅನುಷ್ಠಾನಕ್ಕೆ ತಂದಿರುವ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ತಾಲ್ಲೂಕನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ.

ಸ್ಥಳೀಯ ನಟರಾಜ ಕಲಾಭವನದಲ್ಲಿ `371(ಜೆ) ಕಲಂಗೆ ಹರಪನಹಳ್ಳಿ ತಾಲ್ಲೂಕನ್ನು ಸೇರ್ಪಡೆಗೊಳಿಸಿ ಹೋರಾಟ ಸಮಿತಿ' ಭಾನುವಾರ ಏರ್ಪಡಿಸಿದ್ದ `ಹೋರಾಟದ ಮುಂದಿನ ಹೆಜ್ಜೆಗಳೇನು..!?- ಚರ್ಚಾಸಭೆ' ಯಲ್ಲಿ ಸೆ. 20ರಂದು ಬೆಂಗಳೂರಿನ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲು ಸಭೆ ಧ್ವನಿಮತದ ಮೂಲಕ ನಿರ್ಣಯ ಅಂಗೀಕರಿಸಿತು.

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್) ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಎಚ್.ಎಂ.ಸಂತೋಷ್ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ತಾಲ್ಲೂಕಿನಾದ್ಯಂತ ವಿಶೇಷ ಸ್ಥಾನಮಾನ ಸೇರ್ಪಡೆ ಸಂಬಂಧಿತ ಹೋರಾಟಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ಅದನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಜನರ ನೋವು- ನಲಿವುಗಳಿಗೆ ಮಿಡಿಯದ ಜನಪ್ರತಿನಿಧಿಗಳು ಇದ್ದರೂ ಜೀವಂತ ಶವ ಇದ್ದಂತೆ. ಅವರ ಇರುವಿಕೆಯನ್ನು ತಾಲ್ಲೂಕಿನ ಜನತೆ ಪ್ರಶ್ನಿಸಬೇಕಾಗುತ್ತದೆ.

ಚಳವಳಿಯನ್ನು ತೀವ್ರಗೊಳಿಸುವ ಮೂಲಕ ತಾಲ್ಲೂಕಿನ ಜನರ ಒಕ್ಕೊರಲ ಕೂಗನ್ನು ಹಾಗೂ ಸಾಂವಿಧಾನಿಕ ಹಕ್ಕನ್ನು ಪಡೆಯಲು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ಮಂಡಿಸಿದರು.
ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಸಂಸ್ಥಾನದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ನೇತೃತ್ವವಹಿಸಿದ್ದರು.

ಶಾಸಕ ಎಂ.ಪಿ. ರವೀಂದ್ರ, ಹೋರಾಟ ಸಮಿತಿ ಸಂಚಾಲಕರಾದ ಇದ್ಲಿ ರಾಮಪ್ಪ, ಹೊಸಳ್ಳಿ ಮಲ್ಲೇಶ್, ಹಿರಿಯ ಸಾಹಿತಿ ಡಿ. ರಾಮನಮಲಿ, ಚಿಂತಕ ಜೆ.ಎಂ. ಸರ್‌ಖವಾಸ್, ಪ್ರೊ.ಎಂ. ತಿಮ್ಮಣ್ಣ, ಟಿಎಂಎಇ ಸಂಸ್ಥೆ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಹಿರಿಯ ವಕೀಲರಾದ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಗಂಗಾಧರ ಗುರುಮಠ್, ವೈದ್ಯ ಡಾ.ಮಹೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ. ನಾಯ್ಕ, ಮುಖಂಡ ಆರುಂಡಿ ನಾಗರಾಜ, ಜೆಡಿಎಸ್ ಪಕ್ಷದ ಮುಖಂಡ ಎ.ಜಿ. ವಿಶ್ವನಾಥ, ಕೆಜೆಪಿಯ ಎಚ್.ಎಂ. ಜಗದೀಶ್, ಮುಖಂಡರಾದ ಕಲ್ಲಹಳ್ಳಿ ಮಂಜುನಾಥ, ಸಿಪಿಐ(ಎಂಲ್) ದೊಡ್ಡಮನಿ ಪ್ರಸಾದ್, ಎಚ್. ವೆಂಕಟೇಶ್, ಪ್ರಸನ್ನಕುಮಾರ ಜೈನ್, ನಿಚ್ಚವ್ವನಹಳ್ಳಿ ಭೀಮಪ್ಪ, ಕಬ್ಬಳ್ಳಿ ಮೈಲಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.