ADVERTISEMENT

ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2010, 13:00 IST
Last Updated 17 ಡಿಸೆಂಬರ್ 2010, 13:00 IST

ದಾವಣಗೆರೆ: ನಕಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದ ಘಟನೆ ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ದ್ವಿತೀಯ ಬಿಎಸ್‌ಸಿ (ಪಿಸಿಎಂ) ವಿದ್ಯಾರ್ಥಿಗಳಾದ ಕೆ. ಮಂಜುನಾಥ, ಲೋಕ್ಯಾನಾಯ್ಕ, ಲೋಕೇಶ್ ನಾಯ್ಕ ಸಿಕ್ಕಿಬಿದ್ದವರು.

ಘಟನೆ ವಿವರ: ತೃತೀಯ ಬಿಎ ವಿದ್ಯಾರ್ಥಿಗಳಾದ ಎನ್. ವೆಂಕಟೇಶ್, ಸಂಗಪ್ಪ, ಎಸ್. ಯೋಗೀಶ್ ಅವರು ಬರೆಯಬೇಕಾದ ಇಂಗ್ಲಿಷ್ ಪರೀಕ್ಷೆಗೆ ಈ ನಕಲಿ ವಿದ್ಯಾರ್ಥಿಗಳು ಹಾಜರಾಗಿದ್ದರು. ವಿಶ್ವವಿದ್ಯಾಲಯದ ಪರಿವೀಕ್ಷಕರು ಅಭ್ಯರ್ಥಿಗಳ ಪ್ರವೇಶಪತ್ರದ ಸಹಿ ಮತ್ತು ಉತ್ತರ ಪತ್ರಿಕೆ ಸಂಖ್ಯೆಯುಳ್ಳ (ಡೈರಿ) ದಾಖಲೆಗೆ ಹಾಕಲಾದ ಸಹಿಯನ್ನು ಪರಸ್ಪರ ತಾಳೆ ಹಾಕಿದಾಗ ನಕಲಿ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಬೇರೆ ಕೊಠಡಿಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ಲೋಕ್ಯಾ ನಾಯ್ಕ ಮತ್ತು ಲೋಕೇಶ ಪರಾರಿಯಾಗಲು ಯತ್ನಿಸಿ ಶೌಚಾಲಯದೊಳಗೆ ನುಗ್ಗಿದರು. ಶಂಕೆಗೊಂಡ ಪರಿವೀಕ್ಷಕರು ಅವರನ್ನೂ ಹಿಡಿದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವಾಗ ಅಸಲಿ ವಿದ್ಯಾರ್ಥಿಗಳು ಕಾಲೇಜಿನ ಹೊರಗೆ ಇದ್ದುಕೊಂಡು ನಿಗಾ ವಹಿಸಿದ್ದರು ಎಂದು ವಿವಿ ವೀಕ್ಷಕರ ತಂಡದವರಲ್ಲೊಬ್ಬರಾದ ರವೀಂದ್ರ ಮೂರ್ತಿ ತಿಳಿಸಿದರು.

ಕುಲಸಚಿವರ ಮೊಹರು: ವಿದ್ಯಾರ್ಥಿಗಳು ಈ ಕೃತ್ಯಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರು. ವಿವಿ ನೀಡಿದ ಪ್ರವೇಶಪತ್ರದಲ್ಲಿ ನಕಲಿ ವಿದ್ಯಾರ್ಥಿಯ ಭಾವಚಿತ್ರ ಅಂಟಿಸಿ ಅದರ ಮೇಲೆ ವಿವಿ ಪರೀಕ್ಷಾಂಗ ಕುಲಸಚಿವರ ಸಹಿಯುಳ್ಳ ನಕಲಿ ಮೊಹರು ಹಾಕಿದ್ದರು. ಕಾಲೇಜಿನಿಂದ ನೀಡಲಾದ ಗುರುತುಪತ್ರವನ್ನೂ ಇದೇ ರೀತಿ ಬದಲಾಯಿಸಿದ್ದರು. ಇದರಿಂದ ಯಾರಿಗೂ ಸಂಶಯಬಾರದ ರೀತಿ ಕೃತ್ಯ ಎಸಗುತ್ತಿದ್ದರು ಎಂದು ರವೀಂದ್ರಮೂರ್ತಿ ತಿಳಿಸಿದರು. 6 ಜನ (ಅಸಲಿ ಮತ್ತು ನಕಲಿ) ವಿದ್ಯಾರ್ಥಿಗಳನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.