ADVERTISEMENT

ಸಿದ್ಧನೂರಿನಲ್ಲಿ ಹೊಸ ಕೃಷಿ ಪದ್ಧತಿ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 1 ಮೇ 2011, 9:50 IST
Last Updated 1 ಮೇ 2011, 9:50 IST

ದಾವಣಗೆರೆ: ಹವಾಮಾನ ವೈಪರೀತ್ಯಕ್ಕೆ ಸೆಡ್ಡು ಹೊಡೆದು ಕೃಷಿ ಮಾಡುವ ವಿನೂತನ ತಂತ್ರಜ್ಞಾನ ಪದ್ಧತಿ ಅಳವಡಿಕೆಗೆ ದೇಶದ ಒಟ್ಟು 790 ಜಿಲ್ಲೆಗಳ ಪೈಕಿ 100 ಜಿಲ್ಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ದಾವಣಗೆರೆ ಕೂಡಾ ಒಂದು ಎಂದು ಭಾರತೀಯ ಕೃಷಿ ವಿಜ್ಞಾನ ಸಂಸ್ಥೆಯ  8ನೇ ವಲಯದ ನಿರ್ದೇಶಕ ಡಾ.ಪ್ರಭುಕುಮಾರ ತಿಳಿಸಿದರು.

ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ 9ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

 ನ್ಯಾಷನಲ್ ಇನಿಷಿಯೇಟಿವ್ ಆನ್ ಕ್ರಾಪ್ ರೆಸಿಲಿಯಂಟ್ ಅಗ್ರಿಕಲ್ಚರ್ (ನಿಕ್ರಾ) ಎಂಬ ನೂತನ ಯೋಜನೆಯಡಿ ದೇಶದ 100 ಜಿಲ್ಲೆಗಳ ನೂರು ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಮುಖ್ಯ ಉದ್ದೇಶ ಆಯ್ದುಕೊಂಡ ಒಂದು ಗ್ರಾಮದಲ್ಲಿ ನೂತನ ತಂತ್ರಜ್ಞಾನ ಸಹಾಯದಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುವಂತಹ ಸಂದರ್ಭದಲ್ಲಿ ಬೆಳೆಯ ರಕ್ಷಣೆಗೆ ಸೂಕ್ತಕ್ರಮಗಳ ಅನುಸರಿಸುವ ಮಾದರಿಗಳನ್ನು ಅಳವಡಿಸುವುದು. ಅದಕ್ಕಾಗಿ ಮೊದಲಿನಿಂದಲೇ ಅತಿವೃಷ್ಟಿ, ಅನಾವೃಷ್ಟಿ ವಿರುದ್ಧ ಯಾವ ರೀತಿಯ ಸೂಕ್ತಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪೂರ್ವ ತಯಾರಿ ನಡೆಸುವುದು ಎಂದರು.

ದಾವಣಗೆರೆ ತಾಲ್ಲೂಕಿನ ಆನಗೋಡು ಬಳಿಯ ಸಿದ್ದನೂರು ಗ್ರಾಮ ಈ ಯೋಜನೆಯ ಅನುಷ್ಠಾನಕ್ಕೆ ಆಯ್ಕೆಯಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರದಿಂದ ` 20ಲಕ್ಷ ಬಿಡುಗಡೆಯಾಗಿದೆ. ಯೋಜನೆಗೆ ಒಟ್ಟು ` 40ಲಕ್ಷ ವ್ಯಯಿಸಲಾಗುತ್ತದೆ ಎಂದು ಅವರು ಹೇಳಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಉದ್ಘಾಟನೆಯಾಗಿದ್ದು, ಇದಕ್ಕೆ ಐಸಿಎಆರ್‌ನಿಂದ ` 14ಲಕ್ಷ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ವಿಸ್ತರಣಾ ನಿದೇಶಕ ಆರ್.ಎಸ್. ಕುಲಕರ್ಣಿ ಮಾತನಾಡಿದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮ್ಯಾನೇಜ್‌ಮೆಂಟ್‌ನ ಸದಸ್ಯ ಡಾ.ಎಂ.ಎನ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕೇಂದ್ರದ ಸಂಯೋಜಕ ಡಾ. ಟಿ.ಎನ್. ದೇವರಾಜ್, ಬಿ.ಜಿ. ಮಲ್ಲಿಕಾರ್ಜುನ್, ಡಾ.ಜಿ.ಕೆ. ಜಯದೇವಪ್ಪ, ಜೆ. ರಘುರಾಜ, ಎಂ.ಜಿ. ಬಸವನಗೌಡ, ಡಾ.ಎಚ್.ಎಂ. ಪ್ರದೀಪ್, ಎನ್. ಪ್ರಸನ್ನಕುಮಾರ್ ಹಾಗೂ ಎಸ್.ಬಿ. ವಿಜಯಕುಮಾರ್ ವಿಷಯ ಮಂಡಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ, ಕೈಗಾರಿಕೆ, ಮೀನುಗಾರಿಕೆ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಕೃಷಿ ತಜ್ಞರು, ಕೃಷಿ ಪ್ರಶಸ್ತಿ ವಿಜೇತರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.