ADVERTISEMENT

ಸುಶಿಕ್ಷಿತರ ನಿರಾಸಕ್ತಿ ಒಕ್ಕಲುತನಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 5:25 IST
Last Updated 28 ಜನವರಿ 2012, 5:25 IST

ಹರಪನಹಳ್ಳಿ: ಸಾಂಪ್ರದಾಯಿಕ ಹಾಗೂ ಅವೈಜ್ಞಾನಿಕ ಕೃಷಿ ಪದ್ಧತಿ ಒಕ್ಕಲುತನ ಸಂಸ್ಕೃತಿಯ ಅವನತಿಗೆ ಕಾರಣವಾಗಿದ್ದು, ಭವಿಷ್ಯದಲ್ಲಿ ಒಕ್ಕಲುತನ ವೈಭವ ಮರುಕಳಿಸಲು ಸುಶಿಕ್ಷಿತ ಸಮುದಾಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಜರೂರಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಡೀನ್ ಡಾ.ವಿ.ಐ. ಬೆನಗಿ ಅಭಿಪ್ರಾಯಪಟ್ಟರು.

ಶುಕ್ರವಾರ ಸ್ಥಳೀಯ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಹಯೋಗದಲ್ಲಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ, ಕೃಷಿ ಇಲಾಖೆ ಹಾಗೂ ತಾಲ್ಲೂಕು ಕೃಷಿಕ ಸಮಾಜ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಆಹಾರ ಧಾನ್ಯಗಳ ರೋಗ ಲಕ್ಷಣಗಳು, ಹತೋಟಿ ಕ್ರಮ ಹಾಗೂ ಸಂಗ್ರಹಣೆ~ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗಾಲೋಟದಲ್ಲಿ ಬೆಳೆಯು ತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೌಷ್ಟಿಕ ಆಹಾರ ಉತ್ಪಾದನೆಯಲ್ಲಿಯೂ ಹೆಚ್ಚಳ ಆಗಬೇಕಿದೆ. ದುರಂತ ಎಂದರೆ,  ಪ್ರತಿವರ್ಷ ಕೃಷಿ ಯೋಗ್ಯ ಫಲವತ್ತಾದ ಭೂಮಿ, ಅಭಿವೃದ್ಧಿ, ಭೂಸಾರ ಸಂರಕ್ಷಣೆ ಕೊರತೆ ಹಾಗೂ ಜೌಗು ಪ್ರದೇಶದಂತಹ ಕ್ರಿಯೆಗಳು ಕೃಷಿ ಭೂಮಿಯನ್ನು ಸಂಕುಚಿತ ಗೊಳಿಸುತ್ತಿವೆ. ಜತೆಗೆ, ಅವೈಜ್ಞಾನಿಕ ವ್ಯವಸಾಯ ಪದ್ಧತಿ ಪರಿಣಾಮ, ಬೆಳೆಗಳಿಗೆ ತಗುಲುವ ರೋಗಬಾಧೆ, ಅವುಗಳ ಹತೋಟಿ ಕ್ರಮ ಹಾಗೂ ದೀರ್ಘಕಾಲದವರೆಗೂ ಶೇಖರಿಸುವ ವೈಜ್ಞಾನಿಕ ತಂತ್ರಜ್ಞಾನದ ಕೊರತೆಯಿಂದಲೂ ಆಹಾರ ಉತ್ಪಾದನೆಯ ಮೇಲೆ ಭಾರೀ ಹೊಡೆತಬಿದ್ದಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿನ ನಕಲಿ ಔಷಧಿ ಹಾಗೂ ಉತ್ಪನ್ನಗಳಿಗಿರುವ ಅವೈಜ್ಞಾನಿಕ ಬೆಲೆ ರೈತರನ್ನು ಆತ್ಮಹತ್ಯೆಯ ಮೃತ್ಯುಕೂಪಕ್ಕೆ ತಳ್ಳಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇವೆಲ್ಲವುಗಳನ್ನು ಪರಾಮರ್ಶಿಸಿ, ಕೃಷಿ ಕ್ಷೇತ್ರದ ಪುನಶ್ಚೇತನಕ್ಕಾಗಿ ಸುಶಿಕ್ಷಿತರು ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರಾಂಶುಪಾಲ ಎಸ್. ನಾಗೇಂದ್ರಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ. ರಾಜಪ್ಪ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬೇವಿನಹಳ್ಳಿ ನಿಂಗಪ್ಪ ಮಾತನಾಡಿದರು. ಕಾಲೇಜು ಸಲಹಾ ಮಂಡಳಿಯ ಸದಸ್ಯ ಡಾ.ಮಲ್ಕಪ್ಪ ಅಧಿಕಾರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ. ರುದ್ರಪ್ಪ, ಉಪನ್ಯಾಸಕ ಹನುಮಂತರೆಡ್ಡಿ, ಸಲಹಾ ಸಮಿತಿ ಸದಸ್ಯ ಅಂಬ್ಲಿ ವಾಗೀಶ ಪ್ರಸಾದ್, ವಿಚಾರ ಸಂಕಿರಣದ ಸಂಚಾಲಕ ಡಾ.ಕೆ. ರವೀಂದ್ರನಾಥ್, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ತಜ್ಞ ಡಾ.ಮಂಜುನಾಥ  ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.