ADVERTISEMENT

ಸೂಳೆಕೆರೆ ತೂಬು ಕಾಯಕಲ್ಪಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 10:00 IST
Last Updated 9 ಜನವರಿ 2012, 10:00 IST

ಚನ್ನಗಿರಿ: ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆಯೆನಿಸಿರುವ ಸೂಳೆಕೆರೆಯ ಮಹತ್ವದ ತೂಬು ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದ್ದು, ಅದಕ್ಕೆ ಕಾಯಕಲ್ಪ ಒದಗಿಸಬೇಕೆಂದು ಪ್ರವಾಸಿಗರು ಒತ್ತಾಯಪಡಿಸಿದ್ದಾರೆ.

ಈ ಕೆರೆ ನಿರ್ಮಾಣವಾಗಿ ಹಲವಾರು ದಶಕಗಳು ಕಳೆದಿವೆ. 27 ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ನೆರೆಯ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಜಗಳೂರು ಪಟ್ಟಣಗಳ ಹಾಗೂ ಹಲವಾರು ಗ್ರಾಮಗಳ ಕುಡಿಯುವ ನೀರಿನ ದಾಹವನ್ನು ಕಳೆದ ಮೂರು ವರ್ಷಗಳಿಂದ ನೀಗಿಸುತ್ತಾ ಬಂದಿದೆ. ಈ ವರ್ಷ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮ ಹಾಗೂ ತ್ಯಾವಣಿಗೆ ಸೇರಿದಂತೆ 26 ಗ್ರಾಮಗಳು ಇದೇ ಪ್ರಥಮ ಬಾರಿಗೆ ಸೂಳೆಕೆರೆಯ ನೀರನ್ನು ಕುಡಿಯಲಿವೆ.

ಅದೇ ರೀತಿ ಜ. 21ರಂದು ಚನ್ನಗಿರಿ ಸೇರಿದಂತೆ 72 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ರೂ.77 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಇಂತಹ ಆಗಾಧವಾದ ಜಲರಾಶಿಯುಳ್ಳ ಸೂಳೆಕೆರೆಯ ತೂಬು ಶಿಥಿಲಗೊಂಡಿದೆ. ತೂಬಿನ ಹಲವಾರು ಕಲ್ಲುಗಳು ಸಂಪೂರ್ಣವಾಗಿ ಸಡಿಲಗೊಂಡಿವೆ. ಈ ತೂಬು ಇರುವ ಜಾಗಕ್ಕೆ ಹೋಗಲು ಇರುವ ಕಬ್ಬಿಣದ ಮೇಲು ಸೇತುವೆಯೂ ಕೂಡಾ ತುಕ್ಕು ಹಿಡಿದಿದೆ. ಈ ತೂಬಿನ ಮೇಲೆ ನಿಂತು ಸೂಳೆಕೆರೆಯ ಜಲರಾಶಿಯನ್ನು ಕಣ್ತುಂಬಾ ಸವಿಯಬಹುದು. ಇಂತಹ ಶಿಥಿಲಗೊಂಡು ಅಪಾಯವನ್ನು ಆಹ್ವಾನಿಸುವಂತಿರುವ ತೂಬಿನ ಮೇಲೆ ನಿಂತು ನೂರಾರು ಪ್ರವಾಸಿಗರು ಸೂಳೆಕೆರೆಯನ್ನು ವೀಕ್ಷಣೆ ಮಾಡುತ್ತಾರೆ.

ಆದ್ದರಿಂದ ಸೂಳೆಕೆರೆಯನ್ನು ಪ್ರಸಿದ್ಧ ಪ್ರವಾಸಿ ಸ್ಥಳವನ್ನಾಗಿ ಮಾಡಲು ಪಣ ತೊಟ್ಟಿರುವ ಮಾಯಕೊಂಡ ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕರು ಈ ಪ್ರಸಿದ್ಧ ಸೂಳೆಕೆರೆಯ ತೂಬಿಗೆ ಕಾಯಕಲ್ಪ ಒದಗಿಸಿ ಇನ್ನು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಬೇಕೆಂದು ಪ್ರವಾಸಿಗರಾದ ಹರಪನಹಳ್ಳಿಯ ಪರಶುರಾಮ್, ರಂಗಪ್ಪ, ಹೊಸದುರ್ಗದ ಚಂದ್ರಪ್ಪ, ಚನ್ನಪ್ಪ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.