ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:45 IST
Last Updated 13 ಸೆಪ್ಟೆಂಬರ್ 2011, 10:45 IST

ದಾವಣಗೆರೆ: ಅಭಿವೃದ್ಧಿ ಕಾಮಗಾರಿ ನಡೆಸುವಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮತ್ತು ಪರ್ಸೆಂಟೇಜ್ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ಜನಜಾಗೃತಿ ಹೋರಾಟ ಸಮಿತಿ ಸದಸ್ಯರು ಸೋಮವಾರ ಇಲ್ಲಿನ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ನಿಯಮಾನುಸಾರ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿಗೆ ಹಣ ಹೊಂದಿಸಲು ಖಾಸಗಿ ಅಥವಾ ಇನ್ನಿತರ ಮೂಲಗಳಿಂದ ಹಣ ತರುತ್ತಾನೆ. ಆ ಹಣದಲ್ಲಿಯೇ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶೇಕಡವಾರು ಇಂತಿಷ್ಟು ಎಂಬಂತೆ ಹಣವನ್ನು ನಿಗದಿತವಾಗಿ ಲಂಚವಾಗಿ ನೀಡಲೇಬೇಕು.

ಇಲ್ಲದಿದ್ದಲ್ಲಿ ಆ ಗುತ್ತಿಗೆದಾರ ನಿರ್ವಹಿಸಿದ ಕಾಮಗಾರಿ ಹಣ ಪಾವತಿಯಾಗುವುದು ವಿಳಂಬವಾಗುತ್ತದೆ ಹಾಗಾಗಿ, ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಪರ್ಸೆಂಟೇಜ್ ರೂಪದಲ್ಲಿ ತಾಂಡವವಾಡುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.

ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಂತರ ಪಾಲಿಕೆ ಆವರಣದಲ್ಲಿ `ಪರ್ಸೆಂಟೇಜ್ ಭೂತ~ದ ಪ್ರತಿಕೃತಿ ದಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ವಾಲ್ಮೀಕಿ ಕೃಷ್ಣ, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುಣಬಗಟ್ಟೆ ನಿಂಗಪ್ಪ, ವಕೀಲ ಎಲ್.ಒ. ಮಂಜುನಾಥ, ಆನೆಕೊಂಡ ನಾಗರಾಜ್, ಕಂಚಿಕೆರೆ ನಾಗರಾಜ್, ಎಸ್.ಡಿ. ಸೈಯದ್ ರಹಮತ್‌ಉಲ್ಲಾ, ಕೆ.ಡಿ. ಅಂಜಿನಪ್ಪ, ಕಡ್ಲೇಬಾಳು ಚಂದ್ರಶೇಖರ್, ಮದನ್‌ಕುಮಾರ್, ಎಂ. ರವಿ, ಎ.ಬಿ. ಲಿಂಗಾರೆಡ್ಡಿ, ಎಸ್.ಜಿ. ಸೋಮಶೇಖರ್, ಬಿ. ಬಸವರಾಜ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.