ADVERTISEMENT

ಸ್ವಉದ್ಯೋಗ ಸ್ವಾವಲಂಬನೆಗೆ ದಾರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:40 IST
Last Updated 2 ಫೆಬ್ರುವರಿ 2011, 6:40 IST

ಗ್ರಾಮೋದ್ಯೋಗ ವಸ್ತು ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್

ದಾವಣಗೆರೆ: ನಿರುದ್ಯೋಗ ನಿವಾರಣೆಗೆ ಸ್ವಉದ್ಯೋಗ ಕೈಗೊಳ್ಳುವುದು ಉತ್ತಮ ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ನಡೆದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಪ್ರಧಾನ ಮಂತ್ರಿ ಸ್ವ ಉದ್ಯೋಗ ಸೃಜನ ಕಾರ್ಯಕ್ರಮದ ಅಡಿ ಜಿಲ್ಲಾಮಟ್ಟದ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿಗ್ರಿ ಪಡೆದಾಕ್ಷಣ ನಾವು ನೌಕರಿಗೆ ಪ್ರಯತ್ನಿಸುತ್ತೇವೆ. ಅದರ ಬದಲಾಗಿ ಸ್ವ ಉದ್ಯೋಗ ಕೈಗೊಂಡರೆ ನಮಗೆ ಉದ್ಯೋಗವಷ್ಟೇ ಅಲ್ಲದೇ ಇತರರಿಗೂ ಉದ್ಯೋಗ ಕಲ್ಪಿಸಿಕೊಡಬಹುದು ಎಂದು ತಿಳಿಸಿದರು.ಇದೀಗ ಉದಾರೀಕರಣ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಉತ್ಪಾದಿತ ವಸ್ತುಗಳಿಗೂ ಜಾಗತಿಕ ಮಾರುಕಟ್ಟೆ ಕಲ್ಪಿಸಬಹುದು. ಅದಕ್ಕಾಗಿ ಒಳ್ಳೆಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಜಿಲ್ಲಾಮಟ್ಟದಲ್ಲಿ ಪರಿಣತರ ಸಮಿತಿ ಪರಿಶೀಲಿಸಿ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಸಹಕರಿಸಲಾಗುವುದು. ಬ್ಯಾಂಕ್‌ಗಳೂ ಇದಕ್ಕೆ ನೆರವಾಗುತ್ತವೆ ಎಂದರು.

ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಸಿ. ಚವ್ಹಾಣ್ ಮಾತನಾಡಿ, ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆ ಅಡಿ ಸ್ವಉದ್ಯೋಗ, ಕೈಗಾರಿಕೆ ಕೈಗೊಳ್ಳುವವರಿಗೆ ್ಙ 25 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯುತ್ತದೆ. ಇಂಥ ಪ್ರದರ್ಶನಗಳ ಮೂಲಕ ಜನರಿಗೆ ವಸ್ತುಗಳ ಪರಿಚಯವಾಗುತ್ತದೆ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ವಿದೇಶಿ ವ್ಯಾಮೋಹದಿಂದ ನಾವು ಖಾದಿಯಿಂದ ದೂರವಾಗುತ್ತಿದ್ದೇವೆ. ಸರ್ಕಾರವೂ ತನ್ನ ನೌಕರರು ಖಾದಿ ಧರಿಸುವಂತೆ ಸೂಚನೆ ನೀಡಬೇಕು. ಅಲ್ಲದೇ ನಾಗರಿಕರೂ ಖಾದಿ ಧರಿಸಬೇಕು. ಬಟ್ಟೆಗಳ ಬೆಲೆಗಳಲ್ಲಿ ತೀರಾ ವ್ಯತ್ಯಾಸ ಇರುವುದು ಏಕೆ ಎಂಬುದೂ ಅರ್ಥವಾಗುತ್ತಿಲ್ಲ ಎಂದು ನುಡಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ಯರ್ರಿಸ್ವಾಮಿ, ಕೆನರಾಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕಿ ಎನ್.ಎಸ್. ಕಿರಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.