ADVERTISEMENT

ಹಣ ದುರುಪಯೋಗ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 9:25 IST
Last Updated 6 ಮಾರ್ಚ್ 2012, 9:25 IST

ಮಾಯಕೊಂಡ:  ಸಮೀಪದ ರಾಮಗೊಂಡನಹಳ್ಳಿಯಲ್ಲಿ ಶನಿವಾರ ಅಡುಗೆ ಮನೆ ನಿರ್ಮಾಣದ  ಹಣವನ್ನು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ   ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ್ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಅಡುಗೆ ಮನೆ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ರೂ.60 ಸಾವಿರ ದುರುಪಯೋಗ ಮಾಡಿಕೊಂಡಿದ್ದಾರೆ. ಇಲಾಖೆಯಿಂದ ಮಂಜೂರಾದ ಹಣವನ್ನು ಕಳೆದ ವರ್ಷ ಮಾರ್ಚ್ 25 ಮತ್ತು 29 ರಂದು ತಲಾ ರೂ.30 ಸಾವಿರ  ಡ್ರಾ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.

ಕಾಮಗಾರಿಯನ್ನು ಇಂದಿಗೂ ಪ್ರಾರಂಭಿಸಿಲ್ಲ. ಶೌಚಾಲಯದ ಹಣವನ್ನೂ ದುರುಪಯೋಗ ಮಾಡಿಕೊಂಡು ಅದನ್ನೂ  ಅಪೂರ್ಣ ಕಾಮಗಾರಿ ಮಾಡಿದ್ದಾರೆ. ಗುತ್ತಿಗೆದಾರರು ಮತ್ತು ಮುಖ್ಯ ಶಿಕ್ಷಕರ ನಡುವೆ ಹಣ ದುರುಪಯೋಗವಾಗಿದೆ. ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಮೂತ್ರ ವಿಸರ್ಜನೆಗಾಗಿ ಹೊಲಗಳಿಗೆ ತೆರಳುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಲು ಮಾಡಿದ ಮನವಿಗೆ ಇಲಾಖಾ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ಇಲಾಖೆ ಅಧಿಕಾರಿಗಳು ಇವರ ಮೇಲೆ ಕ್ರಮ ಜರುಗಿಸಬೇಕು  ಎಂದು  ಜಯ ಕರ್ನಾಟಕ ಸಂಘಟನೆಯ ಕಾರ್ಯಕರು ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮುಖ್ಯ ಶಿಕ್ಷರನ್ನು ಈ ಕುರಿತು ಪ್ರಶ್ನಿಸಿದಾಗ, ತಾವು ಹಣ ದುರುಪಯೋಗ ಮಾಡಿಕೊಂಡಿಲ್ಲ. ಕಾರಣಾಂತರದಿಂದ ಕಾಮಗಾರಿ ಆರಂಭಿಸುವುದು ವಿಳಂಬವಾಗಿದೆ. ಇದನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಅಂದೇ ತರಲಾಗಿದೆ ಎಂದು ಪ್ರತಿಕ್ರಿಯಿಸಿದರು.  

 ಜಯ ಕರ್ನಾಟಕ ಸಂಘಟನೆಯ ಪ್ರಮುಖರಾದ ಕರಿಬಸಪ್ಪ, ಶಿವಕುಮಾರ್,  ಸೈಫುಲ್ಲಾ,  ದೇವರಾಜ್, ಪ್ರದೀಪ್, ಮಂಜುನಾಥ್,  ವಿನೋದ್, ಚಿದಾನಂದಾಚಾರಿ, ರಮೆಶ್ ಮತ್ತಿತರರು ಇದ್ದರು.  ಮಾಯಕೊಂಡ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಗಜೇಂದ್ರಪ್ಪ ಮತ್ತು ಸಿಬ್ಬಂದಿ ಹಾಜರಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.