ADVERTISEMENT

ಹನುಮನಮಟ್ಟಿ: ಮಳೆಗಾಗಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 8:55 IST
Last Updated 15 ಜುಲೈ 2012, 8:55 IST

ಹೊನ್ನಾಳಿ: ತೀವ್ರ ಮಳೆ ಕೊರತೆಯಿಂದ ಕಂಗಾಲಾದ ತಾಲ್ಲೂಕಿನ ಕುಳಗಟ್ಟೆ ಗ್ರಾಮದ ಜನರು ಆಷಾಢ ಮಾಸದ ಕೊನೇ ಶನಿವಾರ ಮಳೆಗಾಗಿ ವಿಶೇಷ ಆಚರಣೆ ನಡೆಸಿದರು.

ಗ್ರಾಮದ ಆಂಜನೇಯ ಸಮೇತ ಕಲ್ಯಾಣ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಹ್ಯಾದ್ರಿ ತಪ್ಪಲಿನ ಹನುಮನಮಟ್ಟಿಗೆ ಪಾದಯಾತ್ರೆ ಮೂಲಕ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದೊಂದಿಗೆ ತೆರಳಲಾಯಿತು. ಅಲ್ಲಿರುವ ಹನುಮಂತ ದೇವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಕ್ತರು ಗ್ರಾಮದ 10-12 ವರ್ಷ ವಯಸ್ಸಿನ ಮೂವರು ಬಾಲಕರನ್ನು ವಿವಸ್ತ್ರರಾಗಿಸಿ, ನೀರು ಸುರಿದು ಮಳೆ ಮಲ್ಲಪ್ಪನ ಪೂಜೆ ನೆರವೇರಿಸಿದರು. ನಂತರ ಮಕ್ಕಳೊಂದಿಗೆ ಭಕ್ತಾದಿಗಳು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಳೆಗಾಗಿ ಪ್ರಾರ್ಥಿಸಿದರು.

ಹನುಮನಮಟ್ಟಿಯಲ್ಲಿ ಗ್ರಾಮಸ್ಥರು ಅಡುಗೆ ಮಾಡಿ, ದೇವರಿಗೆ ನೈವೇದ್ಯ ನೆರವೇರಿಸಿದರು. ಬಳಿಕ ನೂರಾರು ಮಂದಿ ಸಾಮೂಹಿಕ ಭೋಜನ ಮಾಡಿದರು. ಭೋಜನದ ವೇಳೆ ತುಂತುರು ಹನಿ ಸುರಿದು ಭಕ್ತರಲ್ಲಿ ಸಂತಸ ಉಂಟುಮಾಡಿತು.

ಮಳೆ ಮಲ್ಲಪ್ಪನ ಪೂಜೆ
ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಆಷಾಢ ಮಾಸದ ಕೊನೇ ಶನಿವಾರದ ಪ್ರಯುಕ್ತ ಗ್ರಾಮಸ್ಥರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ವಿವಿಧ ಜಾನಪದ ಗೀತೆಗಳನ್ನು ಹಾಡುತ್ತಾ ಗ್ರಾಮದ ಬೀದಿಗಳಲ್ಲಿ ತೆರಳಿದರು.

ಗ್ರಾಮದ ಶಾಂತಜ್ಜಿ ಹೇಳುವಂತೆ, ಈ ಹಿಂದೆ ಮಳೆ ಕೈಕೊಟ್ಟಾಗ ಎರಡು ಬಾರಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಗಿತ್ತು. ಆ ಮೇಲೆ ಮಳೆ ಸುರಿದಿತ್ತು. ಈಗ ಗ್ರಾಮದ ಎಲ್ಲರ ತೀರ್ಮಾನದಂತೆ ಮಳೆ ಮಲ್ಲಪ್ಪನ ಪೂಜೆ ಮಾಡುತ್ತಿದ್ದೇವೆ. ಮಳೆ ಬರುವುದೆಂಬ ಆಶಾಭಾವನೆ ಹೊಂದಿದ್ದೇವೆ ಎನ್ನುತ್ತಾರೆ.

ಒಬ್ಬ ಬಾಲಕನ ತಲೆ ಮೇಲೆ ಮಣೆಯನ್ನಿಟ್ಟು ಪೂಜೆ ಮಾಡಿ, ಆತನನ್ನು ಗ್ರಾಮದ ಮನೆಗಳಿಗೆ ಕರೆದುಕೊಂಡು ಹೋಗಿ ಅವರು ನೀಡಿದ ಅಕ್ಕಿ, ಬೇಳೆ, ಬೆಲ್ಲ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದರು.

ಗ್ರಾಮದ ದೇವಸ್ಥಾನದ ಎದುರು ರೊಟ್ಟಿ-ಪಲ್ಯ ಇತರ ಅಡುಗೆ ತಯಾರಿಸಿ ದೇವರಿಗೆ ಹೋಳಿಗೆ ಎಡೆ ಅರ್ಪಿಸಿ, ಮಳೆಗಾಗಿ ಪ್ರಾರ್ಥಿಸಲಾಯಿತು. ನಂತರ ಸಾಮೂಹಿಕ ಭೋಜನ ಸವಿದರು.

ತಿಮ್ಮಪ್ಪನಿಗೆ ಮೊರೆ
ಬಸವಾಪಟ್ಟಣ
: ಮಳೆಗಾಗಿ ಪರಿತಪಿಸುತ್ತಿರುವ ಇಲ್ಲಿನ ರೈತರು ವಿವಿಧ ದೇವರುಗಳ ಪೂಜೆಯ ನಂತರ, ಗ್ರಾಮದ ಪಶ್ಚಿಮದ ಬೆಟ್ಟದಲ್ಲಿ ನೆಲೆಸಿರುವ ತಿಮ್ಮಪ್ಪನಿಗೆ ಮೊರೆ ಹೋಗಿದ್ದಾರೆ.

ರೊಟ್ಟಿ ಬುತ್ತಿ ಮಾಡಿಕೊಂಡು ಬೆಟ್ಟದ ತುದಿಯಲ್ಲಿರುವ ತಿಮ್ಮಪ್ಪನ ಗುಡಿಗೆ, ಇಲ್ಲಿನ ಹಾಲಸ್ವಾಮಿಗಳ ಪಾದುಕೆಗಳೊಂದಿಗೆ ಐದು ಶನಿವಾರ ತೆರಳಿ ಪೂಜೆ ಸಲ್ಲಿಸಿ ಎಡೆ ಮಾಡಿದರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

ಈಗಾಗಲೇ ಎರಡು ಶನಿವಾರ ತೆರಳಿ ಪೂಜೆ ಸಲ್ಲಿಸಿದರೂ ತಿಮ್ಮಪ್ಪ ಇನ್ನೂ ಕಣ್ಣು ಬಿಟ್ಟಿಲ್ಲ. ಆದರೆ, ರೈತರು ಮಾತ್ರ ತಮ್ಮ ಶ್ರದ್ಧೆಯಲ್ಲಿ ಹಿಂದೆ ಬೀಳದೇ ತಂಡೋಪ ತಂಡವಾಗಿ ತಿಮ್ಮಪ್ಪನಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.