ADVERTISEMENT

ಹರಪನಹಳ್ಳಿಯ 6,965 ಕುಟುಂಬಗಳಿಲ್ಲ `ಅನ್ನಭಾಗ್ಯ'

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 9:31 IST
Last Updated 22 ಜುಲೈ 2013, 9:31 IST

ಹರಪನಹಳ್ಳಿ: ಪಡಿತರ ಚೀಟಿ ಪರಿಷ್ಕರಣೆ ಮಾರ್ಗಸೂಚಿಯಿಂದಾಗಿ ತಾಲ್ಲೂಕಿನಲ್ಲಿ 6,965 ಫಲಾನುಭವಿಗಳು ಪಡಿತರ ಚೀಟಿ ಕಳೆದುಕೊಂಡ ಪರಿಣಾಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಸೌಭಾಗ್ಯದಿಂದ ವಂಚಿತಗೊಂಡು ಪರಿತಪಿಸುತ್ತಿವೆ.

ಕಳೆದ ಮಾರ್ಚ್ ತಿಂಗಳಲ್ಲಿಯೇ ಪಡಿತರ ಚೀಟಿ ಯೋಜನೆ ಅಡಿ ಅನರ್ಹ ಕುಟುಂಬಗಳು ನುಸುಳದಂತೆ ಕಟ್ಟೆಚ್ಚರ ವಹಿಸುವ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಪಡಿತರ ಚೀಟಿ ಪರಿಷ್ಕರಣೆಯ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಏಪ್ರಿಲ್ ತಿಂಗಳಲ್ಲಿಯೇ ವಿಧಾನಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗಿ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪರಿಷ್ಕರಣ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.

ಹೊಸ ಸರ್ಕಾರ ರಚನೆಯಾಗುತ್ತಿದ್ದಂತಿಯೇ ಪರಿಷ್ಕರಣೆ ಕಾರ್ಯ ನಡೆಸಿದ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರು. ಪಡಿತರ ಚೀಟಿದಾರರು ನಿಗದಿತ ಅವಧಿಯಲ್ಲಿ ಭಾವಚಿತ್ರ ತೆಗೆಸಿಕೊಳ್ಳದ, ವಿದ್ಯುತ್ ಸಂಪರ್ಕದ ಆರ್‌ಆರ್ ಖಾತೆ ಸಂಖ್ಯೆ ನಮೂದಿಸದ ಹಾಗೂ ಮನೆಯ ಸಂಖ್ಯೆ ಜೋಡಣೆ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದಾಗಿ ತಾಲ್ಲೂಕಿನಲ್ಲಿ 6,141 ಬಿಪಿಎಲ್ ಪಡಿತರ ಚೀಟಿ, 824 ಅನ್ನ ಅಂತ್ಯೋದಯ ಹಾಗೂ 4,775ಎಪಿಎಲ್ ಪಡಿತರ ಚೀಟಿಗಳು ರದ್ದಾಗಿವೆ. ಇದರಿಂದಾಗಿ ಹೊಸ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಲ್ಲಿ ರೂ 1ಕ್ಕೆ, ಕೆಜಿ ಅಕ್ಕಿ ದೊರಕುತ್ತದೆ ಎಂಬ ನಿರೀಕ್ಷೆಯಲ್ಲಿದ್ದ 6,965 ಕುಟುಂಬಗಳು ಪರಿತಪಿಸುತ್ತಿವೆ.

ಬಿಪಿಎಲ್ ಕುಟುಂಬಗಳ ಆಯ್ಕೆಗಾಗಿ ಇಲಾಖೆ ಅಧಿಕಾರಿಗಳು ರೂಪಿಸಿರುವ ಮಾನದಂಡಗಳಲ್ಲಿಯೇ ಅನೇಕ ನ್ಯೂನತೆಗಳಿವೆ. ತುಂಡು ಭೂಮಿ, ಅಂಗೈ ಅಗಲದ ಮನೆಯೂ ಇಲ್ಲದ ನಿರ್ಗತಿಕ ಕುಟುಂಬಗಳು ಗುಡಿಸಲುಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಹಾಗಾಗಿ. ಈ ಕುಟುಂಬ ಇಲಾಖೆ ಸೂಚಿಸಿರುವ ವಿದ್ಯುತ್ ಸಂಪರ್ಕದ ಆರ್‌ಆರ್ ಖಾತಾ ಸಂಖ್ಯೆ ಹಾಗೂ ಆಸ್ತಿ ಒಡೆತನದ ಪುರಾವೆ ಒದಗಿಸಲು ಸಾಧ್ಯವಿಲ್ಲ. ಇಂತಹ ಕುಟುಂಬಗಳು ಸಹಜವಾಗಿಯೇ ಬಿಪಿಎಲ್ ಪಟ್ಟಿಯಿಂದ ನಿರ್ಗಮಿಸಿವೆ. ಆದರೆ, ಬಿಪಿಎಲ್ ಫಲಾನುಭವಿ ಪಟ್ಟಿಯಲ್ಲಿ ಅನರ್ಹ ಕುಟುಂಬಗಳೇ ತುಂಬಿಕೊಂಡಿವೆ ಎಂಬ ಅಸಮಾಧಾನದ ವ್ಯಾಪಕ ಕೂಗು ಕೇಳಿ ಬರುತ್ತಿದೆ.

ಅರ್ಹ ಕುಟುಂಬಗಳು ಬಿಪಿಎಲ್ ಪಟ್ಟಿಯಿಂದ ರದ್ದಾಗಿದ್ದರೆ, ಪುನಃ ಅಂತಹ ಕುಟುಂಬಗಳು ಆಯಾ ಗ್ರಾಮ ಪಂಚಾಯ್ತಿ ಅಥವಾ ಪಟ್ಟಣದಲ್ಲಿ ಫ್ರಾಂಚೈಸಿ ಕೇಂದ್ರಗಳ ಮೂಲಕ ಆನ್‌ಲೈನ್ ಸೌಲಭ್ಯದ ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಟ್ಟಣ ಪ್ರದೇಶದ 1,351 ಅರ್ಜಿಗಳು ಹಾಗೂ ಗ್ರಾಮೀಣ ಭಾಗದ 2,283 ಅರ್ಜಿ ಸೇರಿದಂತೆ ಜುಲೈ 19ರ ವೇಳೆಗೆ 3,879 ಅರ್ಜಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿವೆ ಎನ್ನುತ್ತಾರೆ ಆಹಾರ ನಿರೀಕ್ಷಕ ಬಿ.ಟಿ.ಪ್ರಕಾಶ್.

ತಾಲ್ಲೂಕಿನಲ್ಲಿ ಸದ್ಯಕ್ಕೆ 47 ಸಾವಿರ ಬಿಪಿಎಲ್ ಫಲಾನುಭವಿಗಳು ಹಾಗೂ 9,262 ಅನ್ನ ಅಂತ್ಯೋದಯ ಪಡಿತರ ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಅರ್ಹತೆ ಪಡೆದುಕೊಂಡಿವೆ. ಈ ಕುಟುಂಬಗಳಿಗೆ ಸರ್ಕಾರಿ ಸ್ವಾಮ್ಯದ ವಿಎಸ್‌ಎಸ್‌ಎನ್ ಬ್ಯಾಂಕ್, ಪಟ್ಟಣ ಪ್ರದೇಶದ 9 ಹಾಗೂ ಗ್ರಾಮಾಂತರ ಪ್ರದೇಶದ 89 ನ್ಯಾಯಬೆಲೆ ಅಂಗಡಿಗಳ ಮುಖಾಂತರ ಪಡಿತರ ಧಾನ್ಯ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.