ADVERTISEMENT

ಹರಪನಹಳ್ಳಿ: ತಾಲ್ಲೂಕುಮಟ್ಟದ ಯುವಜನ ಮೇಳ ಉದ್ಘಾಟನೆ.ನೇಪಥ್ಯದಲ್ಲಿ ದೇಸಿ ಗ್ರಾಮೀಣ ಕಲೆ: ಕಳವಳ.

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 6:15 IST
Last Updated 11 ಮಾರ್ಚ್ 2011, 6:15 IST

ಹರಪನಹಳ್ಳಿ: ಭವ್ಯ ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಗೆ ಜೀವ ತುಂಬಿದ ದೇಸೀ ಗ್ರಾಮೀಣ ಕಲೆಗಳು ಅವನತಿಯ ಹಾದಿಯಲ್ಲಿವೆ ಎಂದು ಜಿ.ಪಂ. ಸದಸ್ಯ ಆರ್. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕಿನ ತೆಲಗಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾ.ಪಂ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಥಳೀಯ ಯಂಗ್‌ಸ್ಟಾರ್ ಯುವಕ ಸಂಘ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಯುವಜನ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪರಿಸರದ ಶ್ರಮಸಂಸ್ಕೃತಿಯ ಬೆವರಿನಲ್ಲಿ ಅರಳಿದ ಜಾನಪದ ಕಲೆಗಳಂತಹ ದೇಸೀ ಕಲೆಗಳು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ಭಾವೈಕ್ಯದ ಜತೆಗೆ, ಮಾನವೀಯ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದ್ದವು. ಆದರೆ, ಆಧುನಿಕತೆ ಸಂಸ್ಕೃತಿಯ ಮೇಲೂ ದಾಳಿ ಮಾಡಿದ ಪರಿಣಾಮ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಅಲ್ಲಲ್ಲಿ ಒಂದಿಷ್ಟು ಜೀವಂತಿಕೆ ಪಡೆದುಕೊಂಡಿರುವ ಈ ಕಲೆಗಳನ್ನು ನಶಿಸದಂತೆ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಯುವಜನರ ಮೇಲಿದೆ ಎಂದು ಹೇಳಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಾತನಾಡಿ, ತಲೆಮಾರಿನೊಂದಿಗೆ ತೆರೆ ಮರೆಗೆ ಸರಿಯುತ್ತಿರುವ ಕಲೆಗಳನ್ನು ಜತನದಿಂದ ಜೋಪಾನ ಮಾಡಬೇಕಾದ ಹೊಣೆಗಾರಿಕೆ ಯುವಜನರ ಮೇಲಿದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಸದಸ್ಯ ಎಸ್.ಬಿ. ಹನುಮಂತಪ್ಪ, ಕ್ರೀಡಾಧಿಕಾರಿ ಜೆ. ರಾಮಲಿಂಗಪ್ಪ, ಮಂಜುನಾಥ ಆರ್. ನಾಯ್ಕ, ಯುವಕ ಸಂಘದ ಅಧ್ಯಕ್ಷ ಕೆ. ಯೋಗೀಶ್, ಟಿ. ಉಮಾಕಾಂತ, ಇಲಾಖೆಯ ಅಧಿಕಾರಿ ಶ್ರೀಶೈಲ, ಗ್ರಾ.ಪಂ. ಉಪಾಧ್ಯಕ್ಷೆ ಹನುಮಕ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹನುಮಂತಪ್ಪ, ಶಿಕ್ಷಕರಾದ ಅರ್ಜುನ್ ಪರಸಪ್ಪ, ರಾಮಮೂರ್ತಿ, ಈಶ್ವರಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.