ADVERTISEMENT

ಹರಪನಹಳ್ಳಿ ತಾಲ್ಲೂಕು ಸುತ್ತಮುತ್ತ ಬಿರುಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 9:45 IST
Last Updated 10 ಏಪ್ರಿಲ್ 2012, 9:45 IST

ಹರಪನಹಳ್ಳಿ: ತಾಲ್ಲೂಕಿನ ವಿವಿಧೆಡೆಗಳಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಗೆ ರೂ 4.75ಲಕ್ಷ ಮೊತ್ತದ ತೋಟಗಾರಿಕೆ ಬೆಳೆ ಹಾಗೂ  ಕೆಲ ಮನೆಗಳಿಗೆ ಹೊದಿಸಲಾಗಿದ್ದ ಸಿಮೆಂಟ್ ಶೀಟ್ ಹಾಗೂ ಹೆಂಚುಗಳು ಹಾರಿಹೋಗಿದ್ದು, ಭಾಗಶಃ ಹಾನಿಗೊಳಗಾಗಿವೆ ಎಂದು ತಹಶೀಲ್ದಾರ್ ಡಾ.ಸಿ. ವೆಂಕಟೇಶಮೂರ್ತಿ ತಿಳಿಸಿದರು.

ಸೋಮವಾರ ಬಿರುಗಾಳಿಯಿಂದ ಹಾನಿಗೀಡಾದ ಹೊಸಕೋಟೆ, ಕೆರೆಗುಡಿಹಳ್ಳಿ, ಮಾದಿಹಳ್ಳಿ ಹಾಗೂ ಭೀಮ್ಲನತಾಂಡಾ ಗ್ರಾಮಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರಪ್ರಸಾದ್ ಅವರೊಂದಿಗೆ ಭೇಟಿ ನೀಡಿ ಹಾನಿಯ ಪರಿಶೀಲಿಸಿದ ಬಳಿಕ `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಅವರು, ಕೆರೆಗುಡಿಹಳ್ಳಿ ಗ್ರಾಮದ ಪ್ರಕಾಶ್ ಪಾಟೀಲ್ ಎಂಬುವವರ 5ಎಕರೆ ಭೂಪ್ರದೇಶದಲ್ಲಿ ಕಟಾವಿನ ಹಂತದಲ್ಲಿದ್ದ ಫಸಲುಭರಿತ ಬಾಳೆ ಗಿಡಗಳು ಗಾಳಿಯ ಹೊಡೆತಕ್ಕೆ ಸಂಪೂರ್ಣವಾಗಿ ನೆಲಕ್ಕುರುಳಿವೆ. ಹೀಗಾಗಿ ಸುಮಾರು ರೂ 2.50ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ ಎಂದರು.

ಹೊಸಕೋಟೆ ಗ್ರಾಮದ ಸಿದ್ದನಗೌಡ ಎಂಬುವವರಿಗೆ ಸೇರಿದ ತೋಟದಲ್ಲಿನ ಶೇ. 40ರಷ್ಟು ಬಾಳೆಗಿಡಗಳು ನೆಲಕ್ಕೆ ಬಾಗಿರುವುದರಿಂದ,ರೂ1ಲಕ್ಷ ಮೊತ್ತದ ಹಾನಿ ಸಂಭವಿಸಿದೆ. ಇದೇ ಗ್ರಾಮದ ಭರಮನಗೌಡ ಹಾಗೂ ಅಲಗಿಲವಾಡ ತಾಂಡಾ(ಶಿವಪುರ) ಗ್ರಾಮದ ಎನ್. ನಾಗ್ಯನಾಯ್ಕ ಎಂಬುವವರ ತೋಟದಲ್ಲಿನ ಬಾಳೆ ಗಿಡಗಳು ಹಾನಿಗೊಳಗಾಗಿರುವುದರಿಂದ ತಲಾ ರೂ 50 ಸಾವಿರ ಹಾಗೂ ಮಾದಿಹಳ್ಳಿ ಗ್ರಾಮದ ಜಯಮ್ಮ ಎಂಬುವವರ ತೋಟದಲ್ಲಿನ ರೂ 25ಸಾವಿರ ಮೌಲ್ಯದ ಬಾಳೆ ಗಿಡಗಳಿಗೆ ಹಾನಿ ಸಂಭವಿಸಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಸರ್ಕಾರದ ಮಾರ್ಗಸೂಚಿ ಅನ್ವಯ  ಶೇ. 50ಕ್ಕೂ ಅಧಿಕ ಹಾನಿ ಸಂಭವಿಸಿದ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ರೂ 6 ಸಾವಿರ ಮೊತ್ತದ ಪರಿಹಾರ ವಿತರಿಸುವ ಅವಕಾಶ ಇದೆ.

ಹೀಗಾಗಿ ಸದ್ರಿ ಹಾನಿಗೊಳಗಾದ ತೋಟಗಳಲ್ಲಿ ಕೆರೆಗುಡಿಹಳ್ಳಿ ಗ್ರಾಮದ ಪ್ರಕಾಶ್ ಪಾಟೀಲ್ ಎಂಬುವವರ ತೋಟ ಹೊರತು ಪಡಿಸಿದರೆ, ಉಳಿದಾವ ತೋಟಗಳು ಪ್ರತಿಶತ 50ರಷ್ಟು ಹಾನಿಗೊಳಗಾಗಿಲ್ಲ. ಹೀಗಾಗಿ ಹಾನಿಗೊಳಗಾದ ಎಲ್ಲಾ ರೈತರ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ, ಅವರ ಸೂಚನೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಳೆ ವಿವರ: ಕಸಬಾ, ತೆಲಿಗಿ ಹಾಗೂ ಅರಸೀಕೆರೆ ಹೋಬಳಿಯ ಕೆಲ ಭಾಗಗಳಲ್ಲಿ ಭಾನುವಾರ ಮಧ್ಯಾಹ್ನ ಬಿರುಗಾಳಿ, ಗುಡುಗು-ಸಿಡಿಲು ಸಹಿತ ಮಳೆಯಾದ ವರದಿಯಾಗಿದೆ. ವಿವಿಧ ಮಳೆಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯ ವಿವರ ಇಂತಿದೆ. ಹರಪನಹಳ್ಳಿ ಮಳೆಮಾಪನ ಕೇಂದ್ರದಲ್ಲಿ 9.8ಮಿ.ಮೀ., ತೆಲಿಗಿ ಕೇಂದ್ರದಲ್ಲಿ 9.2ಮಿ.ಮೀ. ಹಾಗೂ ಅರಸೀಕೆರೆ ಮಳೆಮಾಪನ ಕೇಂದ್ರದಲ್ಲಿ 14.8ಮಿ.ಮೀ. ಮಳೆ ದಾಖಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.