ADVERTISEMENT

ಹರಪನಹಳ್ಳಿ: ಬಳುವಳಿಗೆ ಶರಣಾದ ಸದಸ್ಯರು!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:45 IST
Last Updated 14 ಸೆಪ್ಟೆಂಬರ್ 2011, 5:45 IST

ಹರಪನಹಳ್ಳಿ: ಸ್ವಚ್ಛತೆ ಕೊರತೆಯಿಂದ ಮನೆ ಸೇರಿಕೊಂಡ ಕೋರಿ ಹುಳು,ಕ್ಲಬ್‌ನಲ್ಲಿ ಕಾಲ ಕಳೆಯೋ ಪಿಡಿಒ, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಅಕ್ರಮ, ಬಿಸಿಎಂ ವಿದ್ಯಾರ್ಥಿನಿಲಯದ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ, ಶಿಕ್ಷಣ ಇಲಾಖೆಯ ಶಿಷ್ಟಾಚಾರ ಉಲ್ಲಂಘನೆ....

ಇವು ಮಂಗಳವಾರ ತಾ.ಪಂ. ರಾಜೀವ್‌ಗಾಂಧಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಮಾಲಾ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯ ಪ್ರಮುಖ ಮುಖ್ಯಾಂಶಗಳು.ಉಚ್ಚಂಗಿದುರ್ಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಮೇಶ್ ತಾ.ಪಂ. ಯಾವ ಸಭೆಗೂ ಹಾಜುರಾಗುತ್ತಿಲ್ಲ.
 
ಸತತ ಆರೇಳು ತಿಂಗಳಿನಿಂದಲೂ ಗೈರು ಹಾಜರಾಗುತ್ತಾ ಬೇಜಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೊರತೆ ಉಲ್ಬಣಿಸಿದೆ ಎಂದು ಅಧ್ಯಕ್ಷೆ ಜಯಮಾಲಾ ಅಸಮಾಧಾನ ವ್ಯಕ್ತಪಡಿಸಿದರು.

ಇದು ಕೇವಲ ಅಧ್ಯಕ್ಷರ ಪಂಚಾಯತ್ ಸಮಸ್ಯೆಯೊಂದೇ ಅಲ್ಲ. ಪ್ರತಿ ಪಂಚಾಯ್ತಿ ಹಣೆಬರಹ ಹೀಗೆ ಇದೆ. ಹಳ್ಳಿಗಳಲ್ಲಿ ಸ್ವಚ್ಛತೆ ಎಂಬುದನ್ನು ದುರ್ಬಿನ್ ಹಾಕಿ ಹುಡುಕಬೇಕಿದೆ ಎಂದು ಜಿ.ಪಂ. ಸದಸ್ಯರಾದ ಆರ್. ಈಶ್ವರಪ್ಪ, ಎಂ.ಟಿ. ಬಸವನಗೌಡ, ತಾ.ಪಂ. ಸದಸ್ಯರಾದ ಹನುಮಕ್ಕ, ಎಸ್.ಬಿ. ಹನುಮಂತಪ್ಪ,

ಜಯಲಕ್ಷ್ಮೀ, ಐ. ವಿಶ್ವನಾಥ, ದುಗ್ಗಾವತಿ ಹನುಮಂತಪ್ಪ ಹಾಗೂ ಎಸ್. ಮಂಜುನಾಥಧ್ವನಿಗೂಡಿಸಿದರು.
ಕೂಡಲೇ ಉಚ್ಚಂಗಿದುರ್ಗ ಪಿಡಿಒ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮಕ್ಕಾಗಿ ಒತ್ತಾಯಿಸಿ ಜಿ.ಪಂ.ಗೆ ಪತ್ರ ಬರೆಯಲಾಗುವುದು ಎಂದು ವಿಷಯಕ್ಕೆ ತೆರೆ ಎಳೆದರು.

ಕೂಲಹಳ್ಳಿ, ಬಾಗಳಿ, ನಿಚ್ಚವ್ವನಹಳ್ಳಿ ಸೇರಿದಂತೆ ವಿವಿಧ ಗ್ರಾ.ಪಂ.ಯಲ್ಲಿ ಗ್ರಾಮಸಭೆ ನಡೆಸದೆ, ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ನಡೆದಿದೆ. ಕನಿಷ್ಠ ಆ ಭಾಗದ ಜಿ.ಪಂ. ಹಾಗೂ ತಾ.ಪಂ. ಸದಸ್ಯರ ಗಮನಕ್ಕೂ ತಂದಿಲ್ಲ.
 
ಫಲಾನುಭವಿಗಳನ್ನು ಏಕಪಕ್ಷೀಯವಾಗಿ ಆಯ್ಕೆಮಾಡಲಾಗಿದೆ. ಇದಕ್ಕೆ ಕಾರ್ಯ ನಿರ್ವಹಣಾಧಿಕಾರಿ  ಕಣ್ಮುಚ್ಚಿಕೊಂಡು ಅನುಮೋದನೆ ನೀಡಿದ್ದಾರೆ  ಎಂದು ಜಿ.ಪಂ. ಸದಸ್ಯೆ ಕವಿತಾ ಆರ್. ರಾಮಗಿರಿ ಆರೋಪಿಸಿದರು.

ಮಧ್ಯ ಪ್ರವೇಶಿಸಿದ ಎಸ್.ಬಿ. ಹನುಮಂತಪ್ಪ,  ಬಾಗಳಿ ಕೊಟ್ರೇಶ್ ಹಾಗೂ ಎಸ್. ಮಂಜುನಾಥ, ರಾಜಪ್ಪ, ಯೋಜನೆ ಕ್ರಮಬದ್ಧವಾಗಿ ನಡೆದಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆಯಲ್ಲಿ ಅವಕಾಶ ದೊರಕದೆ, ಅಕ್ರಮ ಎಸಗಲಾಗಿದೆ. ಈಗಾಗಲೇ ಅನುಮೋದನೆಗೆ ಕಳುಹಿಸಿದ್ದರೆ, ಮುಂದೆ ನೋಂದಣಿ ಆಗದಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದರು.

ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಲಯದ ಖಾಲಿ ಸ್ಥಾನಗಳಿಗೆ ನಡೆದ ಆಯ್ಕೆ ಪ್ರಕ್ರಿಯೆ ಅಸಮರ್ಪಕವಾಗಿದೆ. ಯಾವ ಮಾನದಂಡದ ಮೇಲೆ ಆಯ್ಕೆ ನಡೆದಿದೆ? ಈ ಕುರಿತು ಸಾಮಾಜಿಕ ನ್ಯಾಯಸಮಿತಿ ಸಭೆಯಲ್ಲಿಯೂ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆಯ ಪ್ರಭಾರಿ ವಿಸ್ತರ್ಣಾಧಿಕಾರಿ ಬಸವರಾಜಪ್ಪ ಉತ್ತರಿಸಿ, 45 ಹೆಚ್ಚುವರಿ ಸ್ಥಾನಗಳು ಮಂಜೂರಾಗಿವೆ. ಎಲ್ಲಾ ಸದಸ್ಯರಿಗೂ ಸ್ಥಾನಗಳ `ಬಳುವಳಿ~ ನೀಡುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅಸಮರ್ಪಕದ ಆಯ್ಕೆ ಪ್ರಶ್ನೆ ಮರೆಯಾಯಿತು.

ಅರಸೀಕೆರೆ ಗ್ರಾಮದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಬಿಜೆಪಿ ಕಾರ್ಯಕ್ರಮದಂತೆ ನಡೆದಿದೆ. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ. ಕಾಂಗ್ರೆಸ್  ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ.

ಬಿಇಒ ವೀರಣ್ಣ ಎಸ್. ಜತ್ತಿ ಶಿಷ್ಟಾಚಾರವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಸದಸ್ಯ ಎಸ್. ಮಂಜುನಾಥ ಆರೋಪಿಸಿ, ಈ ಕುರಿತು ಸ್ಪಷ್ಟೀಕರಣ ನೀಡಿ ಎಂದು ಪಟ್ಟು ಹಿಡಿದರು. ಎಸ್.ಬಿ. ಹನುಮಂತಪ್ಪ, ಜಯಲಕ್ಷ್ಮೀ ಇತರರು ಧ್ವನಿಗೂಡಿಸಿದರು.

ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯ ಈಶ್ವರಪ್ಪ ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿ, ವಿವಾದಕ್ಕೆ ಅಂತ್ಯ ಹಾಡಿದರು.

ಉಪಾಧ್ಯಕ್ಷ ಎಂ. ಚನ್ನಪ್ಪ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಎಸ್.ಬಿ. ಹನುಮಂತಪ್ಪ, ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ ಹಾಗೂ ಯೋಜನಾಧಿಕಾರಿ ನಾಗೇಂದ್ರಪ್ಪ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.