ADVERTISEMENT

ಹರಿಹರ: ರಾಮಪ್ಪ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:01 IST
Last Updated 17 ಮೇ 2018, 5:01 IST

ಹರಿಹರ: ತೀವ್ರ ಕುತೂಹಲ ಕೆರಳಿಸಿದ್ದ ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಪಿ. ಹರೀಶ್ ಅವರನ್ನು 7,650 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‍ ಅಭ್ಯರ್ಥಿ ಶಾಸಕ ಎಚ್‍.ಎಸ್‍. ಶಿವಶಂಕರ್‍ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮತ ಏಣಿಕೆ ಆರಂಭದ ಮೊದಲ ಸುತ್ತಿನಲ್ಲಿ ಜೆಡಿಎಸ್ ಹಾಗೂ ಎರಡನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಕುತೂಹಲ ಮೂಡಿಸಿತ್ತು. ನಂತರ ಮುನ್ನಡೆ ಸಾಧಿಸಿದ ಕಾಂಗ್ರೆಸ್, ಅಂತಿಮ ಸುತ್ತಿನವರೆಗೂ ಅಂತರ ಕಾಯ್ದುಕೊಂಡಿತು. ಕೊನೆಯ ಸುತ್ತಿನ ಏಣಿಕೆಯ ನಂತರ 60,556 ಮತಗಳನ್ನು ಪಡೆದ ರಾಮಪ್ಪ ಗೆಲುವಿನ ನಗೆ ಬೀರಿದರು.

ರಾಮಪ್ಪ ಅವರ ಗೆಲುವು ಪ್ರಕಟವಾಗುತ್ತಿದ್ದಂತೆ, ನಗರದ ಹಳ್ಳದಕೇರಿಯಲ್ಲಿ ರಾಮಪ್ಪ ಮನೆಯ ಬಳಿ ಹಾಗೂ ಕಾಂಗ್ರೆಸ್ ಕಚೇರಿಯ ಬಳಿ ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿ, ಕಾಂಗ್ರೆಸ್ ಮತ್ತು ರಾಮಪ್ಪ ಪರ ಘೋಷಣೆಗಳನ್ನು ಕೂಗಿದರು.

ADVERTISEMENT

ಗೆಲುವಿನ ಬಳಿಕ ರಾಮಪ್ಪ ಬೆಳ್ಳೂಡಿ ಶಾಖಾ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದರು. ಸಂಜೆ ನಗರದ ಆರೋಗ್ಯ ಮಾತೆ ಚರ್ಚ್‍ನಿಂದ ಆರಂಭಗೊಂಡ ವಿಜಯೋತ್ಸವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯ, ಡೊಳ್ಳುಗಳ ನಾದಕ್ಕೆ ನರ್ತಿಸುತ್ತ ಮೆರವಣಿಗೆ ನಡೆಸಿದರು.

**
ನಗರ ನೀರಿನ ಬವಣೆ ನೀಗಿಸಲು ಅಗತ್ಯ ಜಲ ಸಂಗ್ರಹಾಗಾರ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಬೇಕು
- ರಫೀಕ್‍,  ವ್ಯಾಪಾರಿ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.