ADVERTISEMENT

ಹಿಂಬಡ್ತಿ ಅನಾಹುತ ತಪ್ಪಿಸಿ: 31ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 29 ಮೇ 2018, 7:10 IST
Last Updated 29 ಮೇ 2018, 7:10 IST

ದಾವಣಗೆರೆ: ಹಿಂಬಡ್ತಿ ಅನಾಹುತ ತಪ್ಪಿಸಿ– ಸಂವಿಧಾನ ಹಕ್ಕು ಉಳಿಸಿ, ದೌರ್ಜನ್ಯ ತಡೆ ಕಾನೂನು ಬಿಗಿಗೊಳಿಸಿ–ಪರಿಶಿಷ್ಟ ಜಾತಿ, ಪಂಗಡದ ಮಾನ, ಪ್ರಾಣ ಉಳಿಸಿ ಎಂದು ಒತ್ತಾಯಿಸಿ ಮೇ 31ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ  ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ ಸಂಘರ್ಷ ಸಮಿತಿ, ರಾಜ್ಯ ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿ ಒಕ್ಕೂಟ, ರಾಜ್ಯ ಪರಿಶಿಷ್ಟ ಜಾತಿ/ವರ್ಗಗಳ ನಿವೃತ್ತ ನೌಕರರ ಒಕ್ಕೂಟದಿಂದ ಈ ಧರಣಿ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದ್ದು, ದಾವಣಗೆರೆಯಲ್ಲೂ ನಡೆಯಲಿದೆ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸರ್ಕಾರದ ಎಲ್ಲಾ ಹಂತಗಳ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಶೇ 15 ಮತ್ತು ಪರಿಶಿಷ್ಟ ಪಂಗಡ ಶೇ 3ಕ್ಕಿಂತ ಅಧಿಕ ಪ್ರಮಾಣದಲ್ಲಿ ಇರಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಈ ಆದೇಶವನ್ನು ತಪ್ಪು ಅರ್ಥ ಮಾಡಿಕೊಂಡಿರುವ ನಾನಾ ಇಲಾಖೆಯ ಮುಖ್ಯಸ್ಥರು ಸಮಗ್ರ ಮುಂಬಡ್ತಿ ಮೀಸಲಾತಿಯನ್ನೇ ರದ್ದುಪಡಿಸುವ ಕ್ರಿಯೆಗೆ ಕೈ ಹಾಕಿದ್ದಾರೆ. ಇದು ಪರಿಶಿಷ್ಟ ಜಾತಿ/ ಪಂಗಡಗಳ ಕುಟುಂಬಗಳಿಗೆ ದುಷ್ಪರಿಣಾಮ ಉಂಟು ಮಾಡಿದೆ. ನಿಯಮ ಮೀರಿ ಮುಂಬಡ್ತಿ ರದ್ದುಪಡಿಸಿರುವ ಅಧಿಕಾರಿಗಳ ವಿರುದ್ಧ ಜಾತಿ ನಿಂದನಾ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಬ್ಯಾಕ್‌ಲಾಗ್‌ ಹುದ್ದೆಗಳು ಕಣ್ಮರೆಯಾಗಿವೆ. ಇದರ ಪರಿಣಾಮ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಸಗಿ ವಲಯದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಂಜನಪ್ಪ, ಪರಿಶಿಷ್ಟ ಜಾತಿ/ವರ್ಗಗಳ ನಿವೃತ್ತ ನೌಕರರ ಒಕ್ಕೂಟದ ಅಧ್ಯಕ್ಷ ಕೆ.ರುದ್ರಪ್ಪ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಜನಪ್ಪ ಅವರೂ ಇದ್ದರು.

ಬೇರೆ ಧರ್ಮಕ್ಕೆ ಹೋಗಲು ಚಿಂತನೆ

ಅಸ್ಪೃಶ್ಯತೆಯ ಕಾರಣಕ್ಕೆ ದಾವಣಗೆರೆಯಲ್ಲಿ ಕೂಡಾ ಬಾಡಿಗೆಗೆ ಮನೆ ಸಿಗುವುದಿಲ್ಲ. ದಲಿತರ ಉತ್ಪಾದನೆಗಳನ್ನು ಕೊಳ್ಳುವವರಿಲ್ಲ. ಹಾಗಾಗಿ ಅಸ್ಪೃಶ್ಯತೆ ಇಲ್ಲದ, ಇಲ್ಲಿಗಿಂತ ಹೆಚ್ಚು ಮಾನ–ಪ್ರಾಣ ಕಾಪಾಡುವ, ಗೌರವ ಇರುವ ಧರ್ಮಕ್ಕೆ ಮತಾಂತರಗೊಳ್ಳಲು ಚಿಂತನೆ ನಡೆಯುತ್ತಿದೆ ಎಂದು ಪ್ರೊ.ಸಿ.ಕೆ.ಮಹೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.