ADVERTISEMENT

ಹೆಚ್ಚುತ್ತಿರುವ ವಿವಾಹ ವಿಚ್ಛೇದನ: ಕಳವಳ

ಬ್ರಾಹ್ಮಣರ ವಧು–ವರಾನ್ವೇಷಣೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:16 IST
Last Updated 11 ಜೂನ್ 2018, 4:16 IST

ದಾವಣಗೆರೆ: ‘ಇಂದು ತಂದೆ– ತಾಯಿಗೂ ಹೇಳದೇ ಮದುವೆಯಾಗುವುದು ಕಂಡು ಬರುತ್ತಿದೆ. ಜೊತೆಗೆ ಇಂಥ ಪ್ರಕರಣಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್‌. ವೆಂಕಟನಾರಾಯಣ ಹೇಳಿದರು.

ಬ್ರಾಹ್ಮಣ ಸಮಾಜ ಸೇವಾ ಸಂಘ, ಜಿಲ್ಲಾ ಬ್ರಾಹ್ಮಣ ಸಮಾಜ ಸೇವಾ ಸಂಘ, ಮೈಸೂರಿನ ಬ್ರಾಹ್ಮಣ ಸ್ವಯಂ ಸೇವಕ ಸಂಘ, ಸಪ್ತಪದಿ ಫೌಂಡೇಶನ್‌ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 21ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು– ವರಾನ್ವೇಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬೇರೆ ಬೇರೆ ಸಂಸ್ಕಾರ, ಮೌಲ್ಯಗಳು ಮತ್ತು ಆಹಾರ ಪದ್ಧತಿಯವರ ಜೊತೆಗೆ ಸಂಬಂಧ ಬೆಳೆಸಿದಾಗ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ತ್ರಿಮತಸ್ತ ಬ್ರಾಹ್ಮಣರ ನಡುವೆಯೇ ವಿವಾಹಗಳು ಏರ್ಪಡಬೇಕು. ಬ್ರಾಹ್ಮಣ ಸಮಾಜದ ಸಂಸ್ಕಾರ, ಮೌಲ್ಯಗಳನ್ನು ಉಳಿಸಿ ಬೆಳೆಸಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

ಸರಳ ವಿವಾಹಗಳು ಹೆಚ್ಚಾಗಬೇಕು. ಇದರಿಂದ ಆರ್ಥಿಕ ಒತ್ತಡದ ಕಡಿಮೆಯಾಗಿ ಉಳಿತಾಯ ಮಾಡಲು ಸಾಧ್ಯ. 2ರಿಂದ 3 ದಿನಗಳ ಕಾಲ ಮದುವೆ ಮಾಡುವುದರಿಂದ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.

ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್ ಮಾತನಾಡಿ, ‘ಸಮಾಜದಲ್ಲಿ ವಧುಗಳ ಸಂಖ್ಯೆ ಕಡಿಮೆಯಿದೆ. ನಮ್ಮ ಸಮಾಜದಲ್ಲಿ ಜಾಗೃತಿ ಮೂಡಬೇಕಾಗಿದೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ’ ಎಂದರು.

ರಾಜ್ಯದಲ್ಲಿ 40 ಲಕ್ಷ ಬ್ರಾಹ್ಮಣರಿದ್ದಾರೆ. ಆದರೆ, ಮಹಾಸಭಾದ ಸದಸ್ಯತ್ವವನ್ನು ಬಹಳ ಕಡಿಮೆ ಜನ ಪಡೆದಿದ್ದಾರೆ. ರಾಜಕೀಯವಾಗಿ ಬೆಳೆಯಲು ಸಂಘಟನೆ ಬಲಗೊಳ್ಳಬೇಕಾಗಿದೆ. ಹೀಗಾಗಿ ಸದಸ್ಯತ್ವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಮೈಸೂರಿನ ಸಪ್ತಪದಿ ಫೌಂಡೇಶನ್‌ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಎಸ್. ಶ್ರೀನಿವಾಸ್, ಜಿಲ್ಲಾ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎಸ್.ಆರ್. ಹೆಗಡೆ ಮಾತನಾಡಿದರು. ದಾವಣಗೆರೆಯ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ, ಉಪಾಧ್ಯಕ್ಷ ಮೋತಿ ಆರ್. ಪರಮೇಶ್ವರ ರಾವ್, ಕಾರ್ಯದರ್ಶಿ ಎಸ್.ಪಿ. ಸತ್ಯನಾರಾಯಣ ರಾವ್, ಸಪ್ತಪದಿ ಫೌಂಡೇಶನ್‌ನ ಎಸ್. ರಾಘವೇಂದ್ರ ರಾವ್, ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.