ADVERTISEMENT

ಹೈ-ಕ ವಿಶೇಷ ಸ್ಥಾನಮಾನ ಸೇರ್ಪಡೆಗೆ ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 8:00 IST
Last Updated 17 ಆಗಸ್ಟ್ 2012, 8:00 IST

ಹರಪನಹಳ್ಳಿ: ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ ಅನ್ವಯವಾಗುವಂತೆ 371ನೇ ವಿಧಿ ತಿದ್ದುಪಡಿಯೊಂದಿಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ  ಕೇಂದ್ರ ಸರ್ಕಾರದ ಮೇಲೆ, ಶಾಶ್ವತ ಬರಪೀಡಿತಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹರಪನಹಳ್ಳಿ ತಾಲ್ಲೂಕನ್ನು ಸೇರ್ಪಡೆ ಮಾಡುವಂತೆ ಪ್ರಧಾನಮಂತ್ರಿ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.

ಮಿನಿ ವಿಧಾನಸೌಧ ಸಭಾಂಗಣದಲ್ಲಿ ಈಚೆಗೆ ಕಂದಾಯ, ಕೃಷಿ ಹಾಗೂ ಮೀನುಗಾರಿಕೆ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪರಿಹಾರಧನದ ಚೆಕ್ ಹಾಗೂ ಪರಿಕರ ವಿತರಿಸಿ ಅವರು ಮಾತನಾಡಿದರು.

ಬಳ್ಳಾರಿಯಲ್ಲಿದ್ದ ತಾಲ್ಲೂಕನ್ನು ಜಿಲ್ಲೆಯ ಪುನರ್‌ವಿಂಗಡನ ಸಮಿತಿಯ ಶಿಫಾರಸ್ಸಿನ ಅನ್ವಯ ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ. ಭೌಗೋಳಿಕ ಹಾಗೂ ಆಡಳಿತಾತ್ಮಕವಾಗಿ ದಾವಣಗೆರೆ ಜಿಲ್ಲೆಯಲ್ಲಿದ್ದರೂ ಸಹ, ಹರಪನಹಳ್ಳಿ ತಾಲ್ಲೂಕು ಇನ್ನೂ ಬಳ್ಳಾರಿ ಹಾಗೂ ಹೈದರಾಬಾದ್-ಕರ್ನಾಟಕ ಪ್ರಾಂತ್ಯದ ಬಾಂಧವ್ಯ ಕಳಚಿಕೊಂಡಿಲ್ಲ. ಜತೆಗೆ, ಹೈದರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ವ್ಯಾಪ್ತಿಯಲ್ಲಿಯೂ ಈವರೆಗೂ ಮುಂದುವರಿದಿದೆ. ವಿಧಾನ ಪರಿಷತ್‌ನ ಈಶಾನ್ಯ ಪದವೀಧರ, ಶಿಕ್ಷಕರ ಮತಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಯ ಮತಕ್ಷೇತ್ರದಲ್ಲಿ ತಾಲ್ಲೂಕು ಈಗಲೂ ಬಳ್ಳಾರಿಯ ನಂಟುಹೊಂದಿದೆ. ಮಳೆಯಾಶ್ರಿತ ಭೂಪ್ರದೇಶ ಹೊಂದಿರುವ ತಾಲ್ಲೂಕು, ಸತತ ಬರದ ಕೆನ್ನಾಲಿಗೆಗೆ ತುತ್ತಾಗಿ ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ನಮೂದಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸುವ ಮೂಲಕ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ತಾಲ್ಲೂಕು ಸೇರ್ಪಡೆಗೊಳಿಸಲು ಪ್ರಧಾನಮಂತ್ರಿ ಮೇಲೆ ಒತ್ತಡ ಹೇರುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಯೋಜನೆ ಅಡಿ 27ಮಂದಿ ಫಲಾನುಭವಿಗಳು ಸೇರಿದಂತೆ, ಹಾವುಕಡಿತ ಪ್ರಕರಣದಲ್ಲಿ  ಸಾವನ್ನಪ್ಪಿದ ಕುಟುಂಬದ ವಾರಸುದಾರರಿಗೆ ಕೃಷಿ ಇಲಾಖೆಯಿಂದ ಪರಿಹಾರಧನದ ಚೆಕ್ ಹಾಗೂ ಮೀನುಗಾರಿಕೆ ಇಲಾಖೆಯ ಪರಿಕರ ವಿತರಿಸಿದರು. ಇದಕ್ಕೂ ಮೊದಲು ಹಳೇ ಓಬಳಾಪುರ ಗ್ರಾಮದಲ್ಲಿ ನೆರೆಸಂತ್ರಸ್ತ ಕುಟುಂಬಗಳ ಸ್ಥಳಾಂತರಕ್ಕಾಗಿ ನಿರ್ಮಿಸಲಾದ ಆಸರೆ ಮನೆಗಳ ಹಕ್ಕುಪತ್ರ ವಿತರಿಸಿದರು.

ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು, ತಹಶೀಲ್ದಾರ್ ಕೆ. ಮಲ್ಲಿನಾಥ, ಸಹಾಯಕ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಮುಖಂಡರಾದ ಆರುಂಡಿ ನಾಗರಾಜ, ಕೆ. ಗಿರಿರಾಜರೆಡ್ಡಿ, ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ಗೋಣಿಬಸಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.