ADVERTISEMENT

ಹೊನ್ನಾಳಿ: ಪತ್ರಿಕೆ ವಿತರಕ ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್!

​ಪ್ರಜಾವಾಣಿ ವಾರ್ತೆ
Published 21 ಮೇ 2012, 4:25 IST
Last Updated 21 ಮೇ 2012, 4:25 IST
ಹೊನ್ನಾಳಿ: ಪತ್ರಿಕೆ ವಿತರಕ ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್!
ಹೊನ್ನಾಳಿ: ಪತ್ರಿಕೆ ವಿತರಕ ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್!   

ಹೊನ್ನಾಳಿ:  ಈತ ಆರ್.ಜಿ. ರೋಹಿತ್. ಬ್ಯಾಡಗಿ ಮೂಲದವರಾದ ಪಟ್ಟಣದ ಬಡ ದಂಪತಿ ವೀಣಾ-ರಾಜು ಆರ್. ಗಚ್ಚಿನಮನಿ ಅವರ ಪುತ್ರ. ಕಿತ್ತು ತಿನ್ನುವ ಬಡತನದಲ್ಲಿ ಅರಳಿದ ಪ್ರತಿಭೆ. ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಶೇ 86.72 ಫಲಿತಾಂಶ ಗಳಿಸಿದ್ದಾನೆ. ಕಾರಿಗನೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿಶಾಲೆಯ ವಿದ್ಯಾರ್ಥಿಯಾಗಿರುವ ಈತ, ಶಾಲೆಯ ಎಲ್ಲಾ ಉಪಾಧ್ಯಾಯರ ಅಚ್ಚುಮೆಚ್ಚಿನ ವಿದ್ಯಾರ್ಥಿ. 

ಪಟ್ಟಣದಲ್ಲಿ ಮನೆ-ಮನೆಗೆ `ಪ್ರಜಾವಾಣಿ~ ಪತ್ರಿಕೆ ವಿತರಿಸುತ್ತ ಛಲದಿಂದ ಓದಿದ ಈತನ ಶ್ರಮಕ್ಕೆ ತಕ್ಕಫಲ ದೊರೆತಿದೆ.ರೋಹಿತ್ ತಂದೆ ಆರ್.ಜಿ. ರಾಜು ಸಣ್ಣ-ಪುಟ್ಟ ವ್ಯಾಪಾರ ಮಾಡಲು ಹೋಗಿ ಕೈಸುಟ್ಟುಕೊಂಡರು. ದಿನದ ತುತ್ತಿಗೂ ತತ್ವಾರದ ಸಂದರ್ಭದಲ್ಲಿ ಮಗನನ್ನು ಓದಿಸುವ ಆಸೆಯನ್ನೇ ಕೈಬಿಟ್ಟರು.
 
ರೋಹಿತ್ ಪ್ರಾಥಮಿಕ ಹಂತದ ಶಿಕ್ಷಣ ಪಡೆಯುವ ವೇಳೆ ಹಣದ ಅಡಚಣೆಯ ಕಾರಣ ಪತ್ರಿಕೆ ವಿತರಿಸುವ ಕಾಯಕ ಪ್ರಾರಂಭಿಸಿದ. ಇದರಿಂದ ಬಂದ ಹಣದಲ್ಲಿ ಕುಟುಂಬ ನಿರ್ವಹಣೆಗೂ ಸ್ವಲ್ಪ ನೀಡುತ್ತಾ ಶಿಕ್ಷಣವನ್ನೂ ಮುಂದುವರಿಸಿದ. 6ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ, ಚನ್ನಗಿರಿಯಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿಶಾಲೆಯ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾದ.

ಶಾಲೆಗೆ ರಜೆ ಇರುವ ವೇಳೆ ಹೊನ್ನಾಳಿಗೆ ಬಂದಾಗ ಒಂದು ದಿನವೂ ಮನೆಯಲ್ಲಿ ವ್ಯರ್ಥವಾಗಿ ಕಾಲಹರಣ ಮಾಡದೇ ಪತ್ರಿಕೆ ವಿತರಿಸುವ ಕಾಯಕ ನಿರ್ವಹಿಸುತ್ತಾ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ರೋಹಿತ್ ಕಂಡರೆ ಎಲ್ಲರಿಗೂ ಪ್ರೀತಿ.

ಸಿವಿಲ್ ಎಂಜಿನಿಯರಿಂಗ್ ಮಾಡಬೇಕು ಎಂಬ ಮಹದಾಸೆ ಹೊಂದಿರುವ ರೋಹಿತ್‌ಗೆ ಕಿತ್ತುತಿನ್ನುವ ಬಡತನ ಅಡ್ಡಿಯಾಗಿದೆ.ಸಹೃದಯಿಗಳು, ದಾನಿಗಳು ಈತನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಒದಗಿಸಬೇಕು ಎಂಬುದು ರೋಹಿತ್ ತಂದೆ-ತಾಯಿಯ ಮನವಿ.
 
ಹೊನ್ನಾಳಿಯ ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ- (ಆರ್.ಜಿ. ವೀಣಾ) 0464101023630ಗೆ ಹಣ ಸಂದಾಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.