ADVERTISEMENT

ಹೊಸ ನೀತಿಯನ್ವಯ ಮರಳು ಮಾರಾಟ

ಹೊನ್ನಾಳಿಯ ಮರಳು ಕ್ವಾರಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 5:29 IST
Last Updated 3 ಜೂನ್ 2017, 5:29 IST
ಹೊನ್ನಾಳಿ ತಾಲ್ಲೂಕಿನ ಅಚ್ಯುತಾಪುರ ಮರಳು ಕ್ವಾರಿಯ ಮುಂಭಾಗದಲ್ಲಿ ಅಳವಡಿಸಿರುವ ಮರಳು ಗುತ್ತಿಗೆ ವಿವರದ ನಾಮಫಲಕವನ್ನು ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮತ್ತು ಅಧಿಕಾರಿಗಳು ವೀಕ್ಷಿಸಿದರು
ಹೊನ್ನಾಳಿ ತಾಲ್ಲೂಕಿನ ಅಚ್ಯುತಾಪುರ ಮರಳು ಕ್ವಾರಿಯ ಮುಂಭಾಗದಲ್ಲಿ ಅಳವಡಿಸಿರುವ ಮರಳು ಗುತ್ತಿಗೆ ವಿವರದ ನಾಮಫಲಕವನ್ನು ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮತ್ತು ಅಧಿಕಾರಿಗಳು ವೀಕ್ಷಿಸಿದರು   

ಹೊನ್ನಾಳಿ: ತಾಲ್ಲೂಕಿನಲ್ಲಿ ನೂತನ ಮರಳು ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ತಾಲ್ಲೂಕಿನ ಅಚ್ಯುತಾಪುರ ಮರಳು ಕ್ವಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

ಹೊಸ ಮರಳು ನೀತಿಯಡಿ ತಾಲ್ಲೂಕಿನ 11 ಬ್ಲಾಕ್‌ಗಳಲ್ಲಿ ಅಚ್ಯುತಾಪುರದಲ್ಲಿ ಎರಡು ಹಾಗೂ ಬೀರಗೊಂಡನಹಳ್ಳಿಯಲ್ಲಿ ಎರಡು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಬೇಲಿಮಲ್ಲೂರು ಬ್ಲಾಕ್ ಇಂದಿನಿಂದ ಆರಂಭವಾಗಿದೆ. ಉಳಿದ ಆರು ಬ್ಲಾಕ್‌ಗಳಲ್ಲಿ ನಿರಾಕ್ಷೇಪಣಾ ಪತ್ರ ನೀಡುವಂತೆ ಪರಿಸರ ಇಲಾಖೆಗೆ ಕೋರಲಾಗಿದೆ ಎಂದರು.

ADVERTISEMENT

ನಾಮಫಲಕದ ಮಾಹಿತಿ ಅಸ್ಪಷ್ಟ: ಮರಳು ಕ್ವಾರಿಯ ಮುಂಭಾಗದಲ್ಲಿ ನಾಮಫಲಕ ಅಳವಡಿಸುವ ಉದ್ದೇಶ ಸಾರ್ವಜನಿಕರಿಗೆ ಮಾಹಿತಿ ನೀಡುವುದಾಗಿದೆ. ಕ್ವಾರಿಯ ವಿಸ್ತೀರ್ಣ, ಮರಳಿನ ದರ ಇತ್ಯಾದಿ ವಿವರಗಳನ್ನು ಅದರಲ್ಲಿ ದೊಡ್ಡದಾಗಿ ನಮೂದಿಸಬೇಕು. ಇದರಿಂದ ಮರಳು ಗುತ್ತಿಗೆದಾರರು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಪ್ಪಿಸುವ ಉದ್ದೇಶವಿದೆ. ಆದರೆ, ಗುತ್ತಿಗೆದಾರರು ಚಿಕ್ಕದಾಗಿ ಅಪೂರ್ಣ ಮಾಹಿತಿಯನ್ನು ನಾಮಫಲಕದಲ್ಲಿ ಬರೆಸಿದ್ದಾರೆ. ಹೆಚ್ಚಿನ ಮಾಹಿತಿ ನೀಡುವಂತೆ ಅವರಿಗೆ ತಾಕೀತು ಮಾಡಲಾಗಿದೆ ಎಂದರು.

ತಾಲ್ಲೂಕಿನ ಹೊಳೆಹರಳಹಳ್ಳಿ ಮರಳನ್ನು ಆಶ್ರಯ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಮರಳು ಕ್ವಾರಿಯ ವಿಸ್ತೀರ್ಣ ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬೆಲೆಗೆ ಮರಳನ್ನು ಮಾರಾಟ ಮಾಡುವಂತಿಲ್ಲ. ಗುತ್ತಿಗೆದಾರರು ಕಾನೂನುಬಾಹಿರ ಚಟುವಟಿಕೆ ನಡೆಸುವಂತಿಲ್ಲ. ಗುತ್ತಿಗೆ ಅವಧಿಯೊಳಗೆ ಷರತ್ತುಬದ್ಧವಾಗಿ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ನದಿಯಲ್ಲಿ ಮರಳು ಗಣಿಗಾರಿಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಜೆ. ನಾಗರಾಜ್, ಗಣಿ ಮತ್ತುಭೂ ವಿಜ್ಞಾನ ಹಿರಿಯ ಅಧಿಕಾರಿ ಪ್ರದೀಪ್, ಹಾಗೂ ವಿನಯ ಬಣಕಾರ್, ನ್ಯಾಮತಿ ಪಿಎಸ್ಐ ತಿಪ್ಪೇಸ್ವಾಮಿ, ಕಂದಾಯ ಇಲಾಖೆ ಸಿಬ್ಬಂದಿ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.