ADVERTISEMENT

‘ಶ್ರಮಿಕರ ಕನಸು ಈಡೇರಿದ್ದು ಸಂತಸ ತಂದಿದೆ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:24 IST
Last Updated 16 ಡಿಸೆಂಬರ್ 2013, 5:24 IST

ಹರಿಹರ: ‘ಸ್ವಂತ ಮನೆ ಹೊಂದಬೇಕು ಎಂಬ ಶ್ರಮಿಕರ ಕನಸು ಈ ರೀತಿ ಕೈಗೊಡಿದ್ದು ಸಂತಸ ನೀಡಿದೆ’ ಎಂದು ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಭಾನುವಾರ ನಡೆದ ಮಾಜೇನಹಳ್ಳಿ ಗ್ರಾಮದೇವತೆ ಹಮಾಲರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಮಾಲರಿಗೆ ನಿವೇಶನಗಳು ದೊರೆತಿರುವುದು ಅವರ ನಿತ್ಯದ ದುಡಿಮೆಗೆ ಅನುಕೂಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆಯ ಎಪಿಎಂಸಿಯ ಜತೆಗೆ ತಾಲ್ಲೂಕಿನ ಎಪಿಎಂಸಿಗಳ ಅಭಿವೃದ್ಧಿ ಬಗ್ಗೆ ಕೂಡ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಿ.ಪಿ.ಹರೀಶ ಮಾತನಾಡಿ, ಶಾಸಕರು ತಾಲ್ಲೂಕಿನಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಮ್ಮ ತಂದೆ ಅವರ ಅವಧಿಯಲ್ಲಿ ನಡೆದಿದ್ದು ಎಂದು ಪ್ರಚಾರ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಭಯದಿಂದ ದೊರೆಯುವ ಜಯ ತಾತ್ಕಾಲಿಕ. ತಾಲ್ಲೂಕಿನಲ್ಲಿ ಭಯದ ವಾತವರಣ ಮೂಡಿದೆ. ಸಂಘದ ಸದಸ್ಯರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸಿದವರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳಿರಿ ಎಂದು ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು ಎಂದರು.

ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಎಂ.ವೀರೇಶ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಜಿ.ಕೆ.ಹನುಮಂತಪ್ಪ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು.

ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ರಾಜು ರೋಖಡೆ, ಎಪಿಎಂಸಿ ಸದಸ್ಯರಾದ ರುದ್ರಪ್ಪ, ಚಂದ್ರಶೇಖರ್ ಪೂಜಾರ್, ಸಂಘದ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ, ಅಧ್ಯಕ್ಷ ಎಚ್.ಬಿ. ರುದ್ರಗೌಡ ಉಪಸ್ಥಿತರಿದ್ದರು.

ನಡತೆ ತಿದ್ದಿಕೊಳ್ಳಿ....
ನಗರದ ಪೊಲೀಸರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅಮಾನವೀಯ ಹಾಗೂ ಅಸಂವಿಧಾನಿಕ ಶಬ್ಧಗಳನ್ನು ಬಳಸಿ ಮಾತನಾಡಿಸುತ್ತಾರೆ ಎಂಬ ದೂರುಗಳಿವೆ. ನಗರ ಪಿಎಸ್ಐ ಮೇಘರಾಜ್ ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು.

– ಮಾಜಿ ಶಾಸಕ ಬಿ.ಪಿ. ಹರೀಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT