ADVERTISEMENT

‘ಹಕ್ಕುಗಳ ರಕ್ಷಣೆ ಪ್ರಜ್ಞಾವಂತ ಸಮಾಜದ ಪ್ರತೀಕ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:40 IST
Last Updated 13 ಡಿಸೆಂಬರ್ 2013, 7:40 IST

ಹರಪನಹಳ್ಳಿ: ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕುಗಳನ್ನು ಪರಿಪೂರ್ಣವಾಗಿ ಪರಿಪಾಲನೆ ಮಾಡಿದಾಗ ಮಾತ್ರ ಪ್ರಜ್ಞಾವಂತ ನಾಗರಿಕ ಸಮಾಜ ಕಟ್ಟಲು ಸಾಧ್ಯ ಎಂದು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಕಿರಿಯ ವಿಭಾಗದ
ನ್ಯಾಯಾಧೀಶ ಪ್ರಕಾಶ್‌ ಅರ್ಜುನ್‌ ಬನಸೋಡೆ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದ ಸಭಾಂಗಣದಲ್ಲಿ ಗುರುವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್‌ ಇಲಾಖೆ ಆಶ್ರಯದಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ನಡೆದ ಕಾನೂನು ಅರಿವು– ನೆರವು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಎರಡು ಮಹಾಯುದ್ಧಗಳಿಂದಾದ ಮಾನವ ಹಕ್ಕುಗಳು ನಡುಬೀದಿಯಲ್ಲಿಯೇ ಹರಣಗೊಂಡವು. ಹೀಗಾಗಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಎಲ್ಲಾ ದೇಶಗಳಲ್ಲಿಯೂ ಮಾನವ ಹಕ್ಕುಗಳ ಆಯೋಗವನ್ನು ರಚಿಸಲು ಮುಂದಾಯಿತು. ರಾಜ್ಯಮಟ್ಟದಲ್ಲಿಯೂ ಆಯೋಗ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಮಾನವ ಹಕ್ಕುಗಳ ಆಯೋಗ ರಚನೆಯ ಹುಟ್ಟು ಸ್ಮರಿಸಿಕೊಂಡರು.

ವಕೀಲರ ಸಂಘದ ಅಧ್ಯಕ್ಷ ಎಸ್‌.ಎಂ.ರುದ್ರಮುನಿಸ್ವಾಮಿ ಮಾತನಾಡಿ, ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಿಂದಾಗಿ ಇಂದಿಗೂ ಸಮಾಜದಲ್ಲಿ ಮಾನವ ಹಕ್ಕುಗಳ ಮೇಲೆ ದಬ್ಬಾಳಿಕೆ, ದಾಳಿ ಹಾಡುಹಗಲಲ್ಲೇ ನಡೆಯುತ್ತಿದೆ. 2010ರಲ್ಲಿ 8,911ಪ್ರಕರಣ, 2011ರಲ್ಲಿ 8,254ಪ್ರಕರಣ, 2012ರಲ್ಲಿ 6,619ಪ್ರಕರಣ ಹಾಗೂ 2013ರಲ್ಲಿ 4,413ಪ್ರಕರಣ ದಾಖಲಾಗಿರುವುದೇ ಮಾನವ ಹಕ್ಕುಗಳ ಹರಣಕ್ಕೆ ಪುರಾವೆ ಒದಗಿಸುತ್ತದೆ. ಮಾನವ ಹಕ್ಕುಗಳ ಮೇಲಿನ ಪ್ರಕರಣಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸುವ ಮೂಲಕ ತ್ವರಿತಗತಿಯಲ್ಲಿ ಪ್ರಕರಣ ವಿಲೇವಾರಿ ಮಾಡುವ ಮೂಲಕ ಹಕ್ಕುಗಳ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಬಿ. ಜಯಪ್ಪ, ಜಗದೀಶ ಬಿಸಿರೊಟ್ಟಿ, ವಕೀಲರ ಸಂಘದ ಉಪಾಧ್ಯಕ್ಷ ಕೆ. ಪ್ರಕಾಶ್‌, ಕಾರ್ಯದರ್ಶಿ ನಾಗರಾಜ್‌, ವಕೀಲರಾದ ಕೆ. ಜಗದಪ್ಪ, ಚಂದ್ರಮೌಳಿ, ಟಿ. ವೆಂಕಟೇಶ್‌, ಬಂಡ್ರಿ ಗೋಣಿಬಸಪ್ಪ, ಸೀಮಾ, ಮೃತ್ಯುಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.