ADVERTISEMENT

11ರಿಂದ ಎಂ.ಪಿ. ಪ್ರಕಾಶ್ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:25 IST
Last Updated 9 ಜುಲೈ 2012, 7:25 IST

ದಾವಣಗೆರೆ: ಹೂವಿನಹಡಗಲಿ ರಂಗಭಾರತಿಯ ಎಂ.ಪಿ. ಪ್ರಕಾಶ್ ಪ್ರತಿಷ್ಠಾನ, ಹರಪನಹಳ್ಳಿಯ ಕಲಾಭಾರತಿ ಎಂ.ಪಿ. ಪ್ರಕಾಶ್ ಅಭಿಮಾನಿ ಬಳಗದ ವತಿಯಿಂದ ಜುಲೈ 11 ಮತ್ತು 12ರಂದು ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ `ಎಂ.ಪಿ. ಪ್ರಕಾಶ್-72 ನಾಟಕೋತ್ಸವ~ ಹಾಗೂ `ಜಾನಪದ ಜಾತ್ರೆ~ ಆಯೋಜಿಸಲಾಗಿದೆ.

ಜುಲೈ 11ರಂದು ಬೆಳಿಗ್ಗೆ 10.30ಕ್ಕೆ ರಕ್ತದಾನ ಶಿಬಿರ ಆಯೋಜಿಸಿದ್ದು, ನಿವೃತ್ತ ವೈದ್ಯಾಧಿಕಾರಿ ಡಾ.ಮಲಕಪ್ಪ ಬಿ. ಅಧಿಕಾರಿ ಉದ್ಘಾಟಿಸುವರು. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ  ಕೆ.ಪಿ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು.

ಸಂಜೆ 6.30ಕ್ಕೆ ನೃತ್ಯ ಮತ್ತು ನಾಟಕೋತ್ಸವ ನಡೆಯಲಿದೆ. ಹರಿಹರದ ಲಿಂಗಾಯತ ಪಂಚಮಸಾಲಿ ಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. `ಎಂ.ಪಿ. ಪ್ರಕಾಶ್ ಎಂಬ ದಂತಕಥೆ~ ಸಾಕ್ಷ್ಯಚಿತ್ರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸಿದರು.

ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಸಿ. ಕೊಂಡಯ್ಯ, ಶಾಸಕರಾದ ಸಂತೋಷ್ ಲಾಡ್,  ಬಿ.ಸಿ. ಪಾಟೀಲ್, ಮಾಜಿ ಶಾಸಕ  ಪಿ.ಟಿ. ಪರಮೇಶ್ವರ ನಾಯ್ಕ ಪಾಲ್ಗೊಳ್ಳುವರು. ಸಾಕ್ಷ್ಯಚಿತ್ರ ರಚಿಸಿದ ತಂಡದ ಚೇತನ್ ನಾಯಕ್, ಅಭಿಜಿತ್ ಪುರೋಹಿತ್, ರೋಶನ್ ಝಾ ಅವರನ್ನು ಸನ್ಮಾನಿಸಲಾಗುವುದು.
ಮಂಜುಳಾ ಪರಮೇಶ ನಿರ್ದೇಶನದಲ್ಲಿ ಬೆಂಗಳೂರಿನ ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ವತಿಯಿಂದ `ನೃತ್ಯ ಸಂಭ್ರಮ~  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಶಿವಮೊಗ್ಗದ `ನಮ್ ಟೀಂ~ ಸಾಸ್ವಿಹಳ್ಳಿ ಸತೀಶ ನಿರ್ದೇಶನದ `ಬಯಲುಸೀಮೆಯ ಕಟ್ಟೆಪುರಾಣ~ ನಾಟಕ ಪ್ರದರ್ಶಿಸಲಿದೆ.

ಜುಲೈ 12ರಂದು `ಎಂ.ಪಿ. ಪ್ರಕಾಶ್ ಮತ್ತು ಜಾನಪದ~ ಕಾರ್ಯಕ್ರಮ ನಡೆಯಲಿದ್ದು, ವಿದ್ವಾಂಸ ಪ್ರೊ.ಹಿ.ಚಿ. ಬೋರಲಿಂಗಯ್ಯ ಉದ್ಘಾಟಿಸುವರು. ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ ಅಧ್ಯಕ್ಷತೆ ವಹಿಸುವರು. ನಂತರ ನಡೆಯುವ ವಿಚಾರ ಸಂಕಿರಣದಲ್ಲಿ `ಶ್ರೀಕೃಷ್ಣ ಪಾರಿಜಾತ ಸಂಗೀತ ಪರಂಪರೆ~ ವಿಷಯ ಕುರಿತು ಕಲಾವಿದ ಬಸವಲಿಂಗಯ್ಯ ಹಿರೇಮಠ ಹಾಗೂ `ಶ್ರೀಮೈಲಾರಲಿಂಗ ಪರಂಪರೆ~ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರೊ.ಮಂಜುನಾಥ ಬೇವಿನಕಟ್ಟಿ ವಿಚಾರ ಮಂಡಿಸುವರು. ಅಂದು ಮಧ್ಯಾಹ್ನ 3ರಿಂದ ಭಾರತೀಯ ಯಾತ್ರಾ ಕೇಂದ್ರದ ಸಂಚಾಲಕ ಕೆ.ವಿ. ನಾಗರಾಜಮೂರ್ತಿ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ಪ್ರದರ್ಶನ ನಡೆಯಲಿದೆ.

ಸಂಜೆ 6ಕ್ಕೆ ಜಾನಪದ ಜಾತ್ರೆ ಕಾರ್ಯಕ್ರಮ ನಡೆಯಲಿದ್ದು, ರಾಜನಹಳ್ಳಿ ವಾಲ್ಮೀಕಿ ಕನಕ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಉದ್ಘಾಟಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಗೋ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ `ಎಂ.ಪಿ. ಪ್ರಕಾಶ್~ ಕಿರುಹೊತ್ತಿಗೆಯನ್ನು ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಬಿಡುಗಡೆಗೊಳಿಸುವರು. ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರನ್ನು ಸನ್ಮಾನಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.