ದಾವಣಗೆರೆ: ಮುಂಗಾರು ಪೂರ್ವದಲ್ಲೇ ಜಿಲ್ಲೆಯ ವಿವಿಧೆಡೆ ಆಗಾಗ ಗುಡುಗು ಸಹಿತ ಜೋರು ಮಳೆ ಸುರಿಯುತ್ತಿರುವ ಕಾರಣ ಡೆಂಗಿ ಪ್ರಕರಣಗಳು ಏರುಗತಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಡೆಂಗಿ ಪ್ರಕರಣಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಹತ್ತಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಳೆದ ವರ್ಷ ಡೆಂಗಿ ಪ್ರಕರಣಗಳು ವಿಪರೀತ ಏರಿಕೆಯಾಗಿದ್ದವು. ಇದರಿಂದ ರೋಗಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು.
ಜಿಲ್ಲೆಯಲ್ಲಿ 2017 ರಿಂದ 2024ರ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ 2 ಬಾರಿ ಡೆಂಗಿ ಪ್ರಕರಣಗಳ ಸಂಖ್ಯೆ 500ರ ಗಡಿ ದಾಟಿದೆ. 2017ರಲ್ಲಿ ಅತೀ ಹೆಚ್ಚು 818 ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ 2023ರ ವರೆಗೂ ಪ್ರತೀ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ 500ರ ಆಸು ಪಾಸಿನಲ್ಲಿದ್ದವು. ಆದರೆ, 2024ರಲ್ಲಿ ಮತ್ತೆ ಏರುಗತಿ ಪಡೆದಿತ್ತು. ಆಗ 713 ಪ್ರಕರಣಗಳು ವರದಿಯಾಗಿದ್ದವು.
ಈ ಬಾರಿಯೂ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಲಕ್ಷಣಗಳು ಗೋಚರಿಸಿರುವ ಕಾರಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೆ ಈಗಾಗಲೇ ಆದೇಶ ನೀಡಿದ್ದಾರೆ.
ಜನವರಿಯಿಂದ ಏಪ್ರಿಲ್ 24ರ ವರೆಗೆ ಜಿಲ್ಲೆಯಲ್ಲಿ 11 ಡೆಂಗಿ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಕೆಲವರು ಈಗಾಗಲೇ ಗುಣಮುಖರಾಗಿದ್ದಾರೆ. ಇನ್ನೂ ಹಲವರು ವಿವಿಧ ಆಸ್ಪತ್ರೆಗಳು, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 725 ಜನ ಶಂಕಿತ ಡೆಂಗಿ ರೋಗಿಗಳ ರಕ್ತ ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಗಾಗಿ 10 ಬೆಡ್‌ಗಳ ವಿಶೇಷ ವಾರ್ಡ್ ತೆರೆಯಲಾಗಿದೆ.
‘ಡೆಂಗಿ ಜ್ವರಕ್ಕೆ ಲಸಿಕೆ ಇಲ್ಲ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ರಕ್ತಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಡೆಂಗಿ ರೋಗಿಗಳು ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಪ್ರಮಾಣ ಕಡಿಮೆ ಇದೆ. ಶೇ 95 ರಷ್ಟು ರೋಗಿಗಳು ಚಿಕಿತ್ಸೆ ಪಡೆದು ಶೀಘ್ರವೇ ಗುಣಮುಖರಾಗುತ್ತಾರೆ. ಶೇ 2ರಿಂದ 4ರಷ್ಟು ರೋಗಿಗಳು ಮಾತ್ರ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಾರೆ. ಅಂಥವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಂ.ಬಿ. ನಾಗೇಂದ್ರಪ್ಪ ತಿಳಿಸಿದರು.
‘ಡೆಂಗಿ ರೋಗಿಯ ಪ್ಲೇಟ್‌ಲೆಟ್ಸ್ ಪ್ರಮಾಣ 20,000 ಕ್ಕಿಂತ ಕಡಿಮೆಯಾದರೆ ಸಮಸ್ಯೆ ಉಂಟಾಗುತ್ತದೆ. ರಕ್ತಕೇಂದ್ರ ಇರುವ ಕಾರಣ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಟ್ಸ್ ಕೊರತೆ ಇಲ್ಲ. ನಿತ್ಯ 2 ಬಾರಿ ವಿಶೇಷ ವಾರ್ಡ್‌ನಲ್ಲಿರುವ ಡೆಂಗಿ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇದಕ್ಕಾಗಿ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ದಂಡಾಸ್ತ್ರ: ಡೆಂಗಿ ತಡೆಗಟ್ಟುವ ನಿಟ್ಟಿನಲ್ಲಿ ದಂಡಾಸ್ತ್ರ ಪ್ರಯೋಗಿಸಲು ಅಧಿಕಾರಿಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಎಲ್ಲೆಂದರಲ್ಲಿ ಅನಗತ್ಯವಾಗಿ ನೀರು ಸಂಗ್ರಹಿಸಿ ಲಾರ್ವಾ ಉತ್ಪತ್ತಿಗೆ ಕಾರಣವಾಗುವವರಿಗೆ ದಂಡ ವಿಧಿಸುವಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಮನೆಯ ಒಳಗೆ ಹಾಗೂ ಹೊರಗೆ ಲಾರ್ವಾ ಉತ್ಪತ್ತಿಯಾಗುವ ರೀತಿಯಲ್ಲಿ ನೀರು ಸಂಗ್ರಹಿಸಿಟ್ಟರೆ ನಗರ ವ್ಯಾಪ್ತಿಯಲ್ಲಿ ₹800 ದಂಡ ವಿಧಿಸಬಹುದಾಗಿದೆ. ಅದೇ ರೀತಿ ವಾಣಿಜ್ಯ ಸಂಸ್ಥೆಗಳು, ಶಾಲಾ– ಕಾಲೇಜುಗಳು ಹಾಗೂ ಇನ್ನಿತರ ಕಚೇರಿಗಳಿಗೆ ₹2,000 ಹಾಗೂ ಕಟ್ಟಡ ಕಾಮಗಾರಿಗಳ ಮಾಲೀಕರಿಗೆ ₹4,000 ದಂಡ ವಿಧಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಈ ಮೇಲಿನ ದಂಡದ ಅರ್ಧದಷ್ಟು ಮೊತ್ತವನ್ನು ನಿಗದಿಪಡಿಸಲಾಗಿದೆ.
ಸೋಂಕಿತ ಈಡೀಸ್ ಈಜಿಫ್ಟೈ ಸೊಳ್ಳೆ ಕಡಿತದಿಂದ ಹರಡುವ ಡೆಂಗಿ ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಇದ್ದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ, ಒಸಡುಗಳಲ್ಲಿ ರಕ್ತಸ್ರಾವ ಆಗುವುದು ಡೆಂಗಿ ಜ್ವರದ ಲಕ್ಷಣಗಳಾಗಿವೆ.
ಡೆಂಗಿ ಜ್ವರ ನಿಯಂತ್ರಣ ಕುರಿತು ಹೆಚ್ಚಿನ ಮಾಹಿತಿಗಾಗಿ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ: 1800 425 8330 ಸಂಪರ್ಕಿಸಬಹುದು.
ಈಗಾಗಲೇ ಮಳೆ ಶುರುವಾಗಿರುವುದರಿಂದ ಈ ಬಾರಿಯೂ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕುಕೆ.ಎಚ್.ಗಂಗಾಧರ್ ಎನ್‌ವಿಬಿಡಿಸಿಪಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ
ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳ ಆರೈಕೆಗೆ ವಿಶೇಷ ವಾರ್ಡ್ ತೆರೆದಿರುವುದು ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಕ್ತಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆಎಂ.ಬಿ.ನಾಗೇಂದ್ರಪ್ಪ ಜಿಲ್ಲಾ ಶಸ್ತ್ರ ಚಿಕಿತ್ಸಕ
l ಮನೆಯಲ್ಲಿನ ತೊಟ್ಟಿ, ಬ್ಯಾರೆಲ್, ಡ್ರಮ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡುವುದು. ಸ್ವಚ್ಛಗೊಳಿಸಿದ ಬಳಿಕ ಪುನಃ ನೀರು ತುಂಬಿಸುವುದು.
l ತೊಟ್ಟಿ, ಬ್ಯಾರೆಲ್, ಡ್ರಮ್‌ಗಳನ್ನು ಸದಾ ಕಾಲ ಮುಚ್ಚಿಡುವುದು.
l ಮನೆಯ ಸುತ್ತಮುತ್ತ ಬಿಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು.
l ಸರ್ಕಾರಿ/ಖಾಸಗಿ ಕಚೇರಿ ಹಾಗೂ ಸಂಸ್ಥೆಗಳ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಈಡೀಸ್ ಈಜಿಪ್ಟೈ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲು ಅಗತ್ಯ ಕ್ರಮ ವಹಿಸುವುದು.
l ಈಡೀಸ್ ಈಜಿಪ್ಟೈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲಿನ ವೇಳೆ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಗಳನ್ನು ಬಳಸುವುದು.
l ಸೊಳ್ಳೆ ನಿರೋಧಕ ಕ್ರೀಮ್, ಲೋಷನ್‌ಗಳನ್ನು ಬಳಸುವುದು. ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಮೈತುಂಬಾ ಬಟ್ಟೆ ಧರಿಸುವುದು.
l ಸಂಜೆ ವೇಳೆ ಸೊಳ್ಳೆ ಬಾರದಂತೆ ತಡೆಯಲು ಮನೆ ಹಾಗೂ ಕಿಟಕಿ ಬಾಗಿಲುಗಳನ್ನು ಮುಚ್ಚುವುದು.
ಕಳೆದ ವರ್ಷ ರಾಜ್ಯದಲ್ಲಿ 18 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗಿಯಿಂದ ಮೃತಪಟ್ಟಿದ್ದರು. ಈ ಬಾರಿಯೂ ರಾಜ್ಯದಲ್ಲಿ ಒಟ್ಟು 1137 ಪ್ರಕರಣಗಳ ಪೈಕಿ 537 ಸೋಂಕಿತರು 18 ವರ್ಷದೊಳಗಿನವರಾಗಿದ್ದಾರೆ. ಹೀಗಾಗಿ ಡೆಂಗಿಯಿಂದ ಮಕ್ಕಳನ್ನು ರಕ್ಷಿಸಲು ವಿಶೇಷ ಕಾಳಜಿಯ ಅಗತ್ಯವಿದೆ.
‘ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಹಂತದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪೈಕಿ ಹೆಚ್ಚಿನವರು ಚಡ್ಡಿ ಹಾಗೂ ಸ್ಕರ್ಟ್‌ಗಳನ್ನು ಧರಿಸಿ ಶಾಲೆಗೆ ಹೋಗುತ್ತಾರೆ. ಹಗಲಿನಲ್ಲಿ ಸಕ್ರಿಯವಾಗುವ ಏಡಿಸ್ ಈಜಿಪ್ಟೈ ಸೊಳ್ಳೆಗಳು ಕಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲ ಮಕ್ಕಳಲ್ಲಿ ಡೆಂಗಿ ಲಕ್ಷಣಗಳು ಸುಪ್ತವಾಗಿರುತ್ತವೆ. ಎಷ್ಟೇ ಪರೀಕ್ಷೆ ನಡೆಸಿದರೂ ಅವು ಪತ್ತೆಯಾಗುವುದೇ ಇಲ್ಲ. ಹೀಗಾಗಿ ಜ್ವರ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮಕ್ಕಳಲ್ಲಿ ವೈರಾಣುಗಳಿಗೆ ಪ್ರತಿರೋಧ ಒಡ್ಡುವ ಶಕ್ತಿ ಕಡಿಮೆ ಇರುತ್ತದೆ. ಡೆಂಗಿ ವೈರಾಣುಗಳು ಕೂಡ ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾನ್ಯ ಜ್ವರವೆಂದು ಭಾವಿಸಿ ನಿರ್ಲಕ್ಷ್ಯ ತೋರಿದರೆ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು’ ಎಂದು ಮಕ್ಕಳ ತಜ್ಞರು ಎಚ್ಚರಿಸಿದರು.
ಮಕ್ಕಳು ಪ್ರತಿದಿನ ಸ್ನಾನ ಮಾಡಿದ ಬಳಿಕ ಕೊಬ್ಬರಿ ಎಣ್ಣೆ ಹಾಗೂ ಬೇವಿನ ಎಣ್ಣೆಯನ್ನು 4:1ರ ಅನುಪಾತದಲ್ಲಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಬೇಕು. ಸೊಳ್ಳೆ ಕಡಿತದಿಂದ ಪಾರಾಗಲು ಇದೂ ಕೂಡ ಒಂದು ಮಾರ್ಗೋಪಾಯ ಎನ್ನುತ್ತಾರೆ ವೈದ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.