ADVERTISEMENT

ವಿಧಾನ ಪರಿಷತ್ 15 ಕ್ಷೇತ್ರದಲ್ಲಿ ಗೆಲುವು ಖಚಿತ: ಬಿ.ಎಸ್‌. ಯಡಿಯೂರಪ್ಪ

ವಿಧಾನ ಪರಿಷತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 3:09 IST
Last Updated 25 ನವೆಂಬರ್ 2021, 3:09 IST
ಚನ್ನಗಿರಿ ತಾಲ್ಲೂಕು ಮುದ್ದೇನಹಳ್ಳಿ ಗ್ರಾಮದ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿಯಿಂದ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ ಇದ್ದರು.
ಚನ್ನಗಿರಿ ತಾಲ್ಲೂಕು ಮುದ್ದೇನಹಳ್ಳಿ ಗ್ರಾಮದ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿಯಿಂದ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ ಇದ್ದರು.   

ಮುದ್ದೇನಹಳ್ಳೀ(ಚನ್ನಗಿರಿ): ವಿಧಾನ ಪರಿಷತ್ ಶಿವಮೊಗ್ಗ ಕ್ಷೇತ್ರದಿಂದ ಶಂಕರಮೂರ್ತಿ ಅವರ ಮಗ ಅರುಣ್ ಸ್ಪರ್ಧಿಸಿದ್ದು, 9 ವಿಧಾನ ಸಭಾ ಸದಸ್ಯರು, 2 ಸಂಸದರು ಬಿಜೆಪಿ ಹೊಂದಿದ್ದು, ಈ ಕ್ಷೇತ್ರ ನೂರಕ್ಕೆ ನೂರು ಬಿಜೆಪಿ ಪಾಲಾಗಲಿದೆ. ಹಾಗೆಯೇ 20 ಕ್ಷೇತ್ರಗಳಿಗೆ ಬಿಜೆಪಿ ಸ್ಪರ್ಧಿಸಿದ್ದು, ಇದರಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದೆ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಷ್ಟೊಂದು ದೊಡ್ಡ ಶಕ್ತಿ ಬಿಜೆಪಿಯ ಕಡೆಗಿದೆ. ಬಿಜೆಪಿ ಸರ್ಕಾರದ ಸಾಧನೆ ಚುನಾವಣಾ ಫಲಿತಾಂಶದಲ್ಲಿ ಪ್ರತಿಬಿಂಬಿಸಬೇಕಾಗಿದೆ. ವಿರೋಧ ಪಕ್ಷದ ಸದಸ್ಯರನ್ನು ಮನವೊಲಿಸಿ, ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕಾರ್ಯಕರ್ತರು ಹಾಗೂ ಮುಖಂಡರು ಮಾಡುವ ಹೊಣೆಗಾರಿಕೆ ಇದೆ. ಜಾತಿಯ ವಿಷ ಬೀಜವನ್ನು ಬಿತ್ತುತ್ತಿರುವ ಕಾಂಗ್ರೆಸ್ ಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ. ಈಗಾಗಲೇ ರಾಜ್ಯದಾದ್ಯಂತ ಮೊದಲ ಸುತ್ತಿನ ಪ್ರಚಾರ ಮಾಡಿದ್ದೇವೆ. 2ನೇ ಸುತ್ತಿನ ಪ್ರಚಾರ ಚನ್ನಗಿರಿಯಿಂದ ಪ್ರಾರಂಭವಾಗಿದೆ. ಮೊದಲನೇ ಪ್ರಾಶಸ್ತ್ಯ ಮತವನ್ನು ಅರುಣ್ ಅವರಿಗೆ ಹಾಕುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ADVERTISEMENT

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕುರುಬರು ದಡ್ಡರು ಎಂದು ಹೇಳಲಾಗುತ್ತಿತ್ತು. ಆದರೆ ಕುರುಬರು ದಡ್ಡರಲ್ಲಿ, ಅವರು ಕೂಡಾ ಜಾಣರು ಎಂದು ಇನ್ನೊಬ್ಬರಿಗೆ ಬುದ್ಧಿ ಕಲಿಸುವಷ್ಟು ಜಾಣರಾಗಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ 4166 ಮತಗಳು ಇದ್ದು, ಇದರಲ್ಲಿ 2800 ಕ್ಕಿಂತ ಹೆಚ್ಚು ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

ಈ ಬಾರಿ ರಾಜ್ಯದಲ್ಲಿ ಬಡವರಿಗೆ 5 ಲಕ್ಷ ಮನೆಗಳನ್ನು ನೀಡಲು ತೀರ್ಮಾನಿಸಿದೆ. ಹಾಗೆಯೇ ಈ ಕ್ಷೇತ್ರದಲ್ಲಿ ಸುವರ್ಣ ಗ್ರಾಮ ಯೋಜನೆಗೆ 5 ಪಂಚಾಯಿತಿಗಳನ್ನು ಆಯ್ಕೆ ಮಾಡಿದೆ. ಗ್ರಾಮಗಳ ಅಭಿವೃದ್ಧಿಗೆ ₹ 25 ಲಕ್ಷ ಅನುದಾನವನ್ನು ನೀಡಲಾಗುವುದು. ಮುಂಬರುವ ಬಜೆಟ್‌ನಲ್ಲಿ ಪಂಚಾಯಿತಿಗಳನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗುವುದು. ಅತಿ ಹೆಚ್ಚು ಅಂತರ್ಜಲ ಮಟ್ಟ ಹೆಚ್ಚಳವಾಗಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.

ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ, ‘ವಿಧವೆಯರು, ಅಂಗವಿಕಲರು ಹಾಗೂ ದೇವದಾಸಿಯರಿಗೆ ವಸತಿಯನ್ನು ಕಲ್ಪಿಸಲು ಈ ಕ್ಷೇತ್ರಕ್ಕೆ 983 ಮನೆಗಳು ಮಂಜೂರಾಗಿವೆ. ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ₹ 85 ಕೋಟಿ ಅನುದಾನ ಬಿಡುಗಡೆಯಾಗಿದೆ. ಮನೆ ಮನೆಗೆ ಗಂಗೆ ಯೋಜನೆ ಅಡಿ ತಾಲ್ಲೂಕಿನ ಮನೆ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ, ನೀರು ಸರಬರಾಜು ಮಾಡಲು ₹ 94 ಕೋಟಿ ಬಿಡುಗಡೆಯಾಗಿದೆ. ಗ್ರಾಮ ಸಡಕ್ ಯೋಜನೆ ಅಡಿ ರಸ್ತೆ ನಿರ್ಮಾಣಕ್ಕೆ ₹ 20 ಕೋಟಿ, ಎಸ್‌ಟಿಪಿ ಯೋಜನೆಗೆ ₹ 6 ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 90 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿಮ್ಮ ಸಹಕಾರ ಅಗತ್ಯ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್, ಬಿಜೆಪಿ ಯುವ ಮುಖಂಡ ಕೆ. ಕೆ. ಕಾಂತೇಶ್, ಜಿಲ್ಲಾ ಚುನಾವಣಾ ಉಸ್ತುವಾರಿ ದತ್ತಾತ್ರೇಯ ಉಪಸ್ಥಿತರಿದ್ದರು. ತಾಲ್ಲೂಕು ಬಿಜೆಪಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.