ADVERTISEMENT

ಹಸೆಮಣೆ ಏರಿದ 16 ಜೋಡಿ

ಹೊಂದಾಣಿಕೆಯಿದ್ದರೆ ಸರಾಗವಾಗಿ ನಡೆಯುವ ಬದುಕಿನ ಬಂಡಿ: ಶಾಮನೂರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 12:14 IST
Last Updated 9 ಅಕ್ಟೋಬರ್ 2019, 12:14 IST
ದಾವಣಗೆರೆಯಲ್ಲಿ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಹರಕೆ ಹೊತ್ತ ಭಕ್ತರ ಜತೆಗೆ ನವಜೋಡಿಗಳು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು
ದಾವಣಗೆರೆಯಲ್ಲಿ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಹರಕೆ ಹೊತ್ತ ಭಕ್ತರ ಜತೆಗೆ ನವಜೋಡಿಗಳು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು   

ದಾವಣಗೆರೆ: ಗಂಡ ಸಿಟ್ಟಾದಾಗ ಪತ್ನಿ ಸುಧಾರಿಸಿಕೊಂಡು ಹೋದರೆ. ಪತ್ನಿ ಸಿಟ್ಟಾದಾಗ ಗಂಡ ಸುಧಾರಿಸಿಕೊಂಡು ಹೋದರೆ ಮಾತ್ರ ಕೊನೆವರೆಗೆ ಪತಿ–ಪತ್ನಿ ಚೆನ್ನಾಗಿ ಇರಲು ಸಾಧ್ಯ. ಬದುಕಿನ ಬಂಡಿ ಸರಾಗವಾಗಿ ಸಾಗಲು ಹೊಂದಾಣಿಕೆಯೇ ಮುಖ್ಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.

ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್‌ನಿಂದ ನವರಾತ್ರಿ ಮತ್ತು ವಿಜಯ ದಶಮಿ ಪ್ರಯುಕ್ತ ಬುಧವಾರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಹಸೆಮಣೆ ಏರಿದ ಹೊಸಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿದರು.

ಮದುವೆ ಅನ್ನುವುದು ಕೌಟುಂಬಿಕ ವ್ಯವಸ್ಥೆಯನ್ನು ಶಾಶ್ವತಗೊಳಿಸುವ ಘಟ್ಟ. ಈ ರೀತಿ ಸಾಮೂಹಿಕವಾಗಿ ಸರಳವಾಗಿ ಮದುವೆಯಾಗುವುದರಿಂದ ಅನಗತ್ಯ ವೆಚ್ಚ ಮಾಡುವುದು ಉಳಿಯುತ್ತದೆ. ಸಾಮರ್ಥ್ಯ ಮೀರಿ ವೈಭವಯುತವಾಗಿ ಮದುವೆಯಾದರೆ ಸಾಲದಲ್ಲಿ ಮುಳಗಬೇಕಾಗುತ್ತದೆ ಎಂದು ತಿಳಿಸಿದರು.

ADVERTISEMENT

ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಧುವಿಗೆ ಸೀರೆ, ಜಾಕೆಟ್‌, ವರನಿಗೆ ಅಂಗಿ, ಪಂಚೆ, ಶಲ್ಯ, ಪ್ರತಿ ಜೋಡಿಗೆ ಬಂಗಾರದ ಎರಡು ತಾಳಿಗಳು, ಬೆಳ್ಳಿ ಕಾಲುಂಗುರ, ಕಡಗ, ಬಾಸಿಂಗ ಹೂವಿನ ಹಾರ ನೀಡಲಾಗಿದೆ. 1971–72ರಿಂದ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡು ಬರಲಾಗಿದೆ’ ಎಂದು ವಿವರ ನೀಡಿದರು.

ಮದು ಮಕ್ಕಳಿಗೆ ನೀಡಿದ ವಸ್ತುಗಳನ್ನು ಕೆ.ಜಿ.ಪಿ. ಗೋಲ್ಡ್ ಪ್ಯಾಲೇಸ್‌, ಎಂ.ಜಿ.ಎಸ್‌. ಜ್ಯೂಯಲ್ಲರ್ಸ್‌, ಎಂ.ಜಿ.ಎಸ್‌. ಜ್ಯೂಯಲ್ಲರ್ಸ್‌ ಕೊಡಮಾಡಿದ್ದರು. ವಧು–ವರರ ಕಡೆಯಿಂದ ಬಂದ ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದಿಂದ ಮಾಡಲಾಯಿತು. ಹಳೇ ಬೆಳವನೂರು ಹಾಲೇಶ್‌ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ದೇವಿಯ ದರ್ಶನ ಪಡೆದ ಬಳಿಕ 16 ಜೋಡಿಗಳು ಹಸೆಮಣೆ ಏರಿದವು. ನಂತರ ಪ್ರದಕ್ಷಿಣೆ ಬಂದು ದೇವಿಗೆ ಎಡೆ ಬಡಿಸಿ ಪೂಜಿಸಲಾಯಿತು.

ಟ್ರಸ್ಟಿಗಳಾದ ಹನುಮಂತರಾವ್‌ ಸಾವಂತ್‌, ಎಚ್‌.ಬಿ. ಗೋಣೆಪ್ಪ, ಬಿ.ಎಚ್‌. ವೀರಭದ್ರಪ್ಪ, ಸಾಳಂಕಿ ಉಮೇಶ್‌, ಸೊಪ್ಪಿನವರ ಗುರುರಾಜ್‌, ಹನುಮಂತ ರಾವ್‌ ಜಾಧವ್‌, ದೇವಸ್ಥಾನದ ಕಾರ್ಯಕರ್ತರಾದ ಕವಿರಾಜ್‌, ಬಾಬು, ಸಾಳಂಕಿ ಬಾಬು, ಕೆ. ಪರಶುರಾಮ್‌, ಜಾವದ್‌ ಜಿ. ನಾಗರಾಜ್‌, ಕರಿಗಾರ್‌ ಬಸಪ್ಪ, ಅರುಣ್‌ ದೇವರಹಟ್ಟಿ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.