ADVERTISEMENT

17ಕ್ಕೆ ಬಾಪೂಜಿ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 6:20 IST
Last Updated 12 ಮಾರ್ಚ್ 2012, 6:20 IST

ದಾವಣಗೆರೆ: ಬಾಪೂಜಿ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಮಾರ್ಚ್ 16 ಹಾಗೂ 17ರಂದು ಹಮ್ಮಿಕೊಳ್ಳಲಾಗಿದೆ.

1958ರಲ್ಲಿ ಆರಂಭವಾದ ವಿದ್ಯಾಸಂಸ್ಥೆ ರಾಜ್ಯದಲ್ಲೇ ಪ್ರಖ್ಯಾತಿ ಪಡೆದಿದ್ದು, 55ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 25 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

16ರಂದು ಸಂಜೆ 6ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ದಾವಣಗೆರೆ ವಿವಿ ಕುಲಪತಿ ಡಾ.ಎಸ್. ಇಂದುಮತಿ, ವಿಶ್ವೇಶ್ವರಯ್ಯ ವಿವಿ ಕುಲಪತಿ ಡಾ.ಎಚ್. ಮಹೇಶಪ್ಪ, ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, ಕುವೆಂಪು ವಿವಿ ಕುಲಪತಿ ಡಾ.ಎಸ್.ಎ. ಬಾರಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ವಿ ಕಮಲಮ್ಮ ಉಪಸ್ಥಿತರಿರುವರು. ಸಂಸ್ಥೆಯ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್ ಅಧ್ಯಕ್ಷತೆ ವಹಿಸುವರು. ಬಾಪೂಜಿ ವಿದ್ಯಾಸಂಸ್ಥೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗಾಯಕರಾದ ನಂದಿತಾ ಹೇಮಂತ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸವರು ಎಂದು ಮಾಹಿತಿ ನೀಡಿದರು.

17ರಂದು ಸಂಜೆ 6ಕ್ಕೆ ನಡೆಯುವ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಭಾಗವಹಿಸುವರು ಎಂದು ವಿವರ ನೀಡಿದರು.
ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉದ್ಯೋಗಿಗಳು, ರ‌್ಯಾಂಕ್ ವಿಜೇತರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸ್ಥೆಯ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಖಜಾಂಚಿ ಎ.ಸಿ. ಜಯಣ್ಣ, ನಿರ್ದೇಶರಾದ ಅಥಣಿ ವೀರಣ್ಣ, ಮಾಕನೂರು ಮಲ್ಲಿಕಾರ್ಜುನಪ್ಪ, ರಾಜನಹಳ್ಳಿ ರಮಾನಂದ್, ಕಿರುವಾಡಿ ಗಿರಿಜಮ್ಮ ಉಪಸ್ಥಿತರಿದ್ದರು.   
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.