ADVERTISEMENT

192 ಕೋಟಿ ಸಹಾಯಧನ ಬಾಕಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 6:25 IST
Last Updated 23 ಏಪ್ರಿಲ್ 2012, 6:25 IST

ದಾವಣಗೆರೆ: ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಅವರ ಬೇಜವಾಬ್ದಾರಿಯಿಂದಾಗಿ ರೈತರಿಗೆ ಸುವರ್ಣ ಭೂಮಿ ಯೋಜನೆಯಡಿ ಸರ್ಕಾರದಿಂದ ಸಹಾಯಧನ ದೊರೆತಿಲ್ಲ ಎಂದು ಸಾವಯವ ಕೃಷಿ ಪರಿವಾರಗಳ  ಒಕ್ಕೂಟ ತಾಲ್ಲೂಕು ಘಟಕ ಆರೋಪಿಸಿದೆ.

ಸಾವಯವ ಕೃಷಿಕರಿಗೆ ಸುವರ್ಣ ಭೂಮಿ ಯೋಜನೆಯಲ್ಲಿ  ತಲಾ ರೂ10 ಸಾವಿರ ಸಹಾಯಧನ ದೊರೆಯುತ್ತದೆ ಎಂದು ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಸಂಪರ್ಕ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದವರಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಆದರೆ,  ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಅವರ ಮೂಲಕ ಅರ್ಜಿ ಸಲ್ಲಿಸಿದವರಿಗೆ ಹಣ ಬಂದಿಲ್ಲ. ರಾಜ್ಯಾದ್ಯಂತ ಈ ಮೊತ್ತ ್ಙ  192 ಕೋಟಿ ಮೀರುತ್ತದೆ ಎಂದು ಒಕ್ಕೂಟದ ಸಂಚಾಲಕ ಪ್ರಭುದೇವ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ತಾಲ್ಲೂಕಿಗೆ, 1,113 ಕೃಷಿಕರನ್ನು ಅಯ್ಕೆ ಮಾಡಿ, ಎಲ್ಲ ಫಲಾನುಭವಿಗಳ ಬ್ಯಾಂಕ್  ಖಾತೆಯನ್ನು ಶಿವಮೊಗ್ಗದ ಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ ತೆರೆದು ವಿವರ ಸಲ್ಲಿಸಿ ಎಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆನಂದ್ ತಿಳಿಸಿದ್ದರು. ಪ್ರತಿ  ರೈತರಿಂದ ರೂ250 ವಂತಿಗೆ ಸಂಗ್ರಹಿಸಲಾಗಿದೆ. ಆದರೆ, ರೈತರ ಖಾತೆಗೆ ಈವರೆಗೂ ಬಿಡಿಗಾಸು ಸಹ ಬಿಡುಗಡೆ ಆಗಿಲ್ಲ. ಈ ಬಗ್ಗೆ ಆನಂದ್ ಅವರನ್ನು ಪ್ರಶ್ನಿಸಿದರೆ, ಈಗ ಹಣ ಬರುವುದಿಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.

ಆನಂದ್ ಮಾತು ನಂಬಿ, ರೈತರಿಂದ ವಂತಿಗೆ ಹಾಗೂ ಮಾಹಿತಿ ಪಡೆದು ನೀಡಿದ ನಾವು ನಿಂದನೆಗೆ ಒಳಗಾಗಬೇಕಿದೆ. ಪರಿವಾರಗಳ ಒಕ್ಕೂಟದ ಅನುಷ್ಠಾನ ಸಮಿತಿಯಲ್ಲಿ 13 ಮಂದಿ ಸದಸ್ಯರಿದ್ದಾರೆ. ಆದರೆ, ಒಂದು ವರ್ಷದಿಂದಲೂ ಸಮಿತಿ ಸಭೆ ನಡೆಸಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೀಗಾಗಿ, ಸರ್ಕಾರ ಅವರನ್ನು ವಜಾಗೊಳಿಸಬೇಕು. ಸುವರ್ಣ ಭೂಮಿ ಯೋಜನೆ ಅಡಿ ರೈತರಿಗೆ ಕೂಡಲೇ ಪ್ರೋತ್ಸಾಹಧನ ದೊರೆಯದಿದ್ದಲ್ಲಿ, ಆನಂದ್ ವಿರುದ್ಧ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ ಎಂದು ತಿಳಿಸಿದರು.

ಸಾವಯವ ಕೃಷಿ ಪರಿವಾರದ ಸಂಚಾಲಕರಿಗೆ ತಲಾ ರೂ7 ಸಾವಿರ ಹಾಗೂ ಪ್ರೇರಕರಿಗೆ  ರೂ1,500  ಮಾಸಿಕ ಗೌರವಧನ ನಿಗದಿಯಾಗಿದೆ. 6 ತಿಂಗಳು ಮಾತ್ರ ಗೌರವಧನ  ಬಂದಿದೆ. ನಂತರ, ಸ್ಥಗಿತಗೊಂಡಿದೆ. ಆದರೆ, ಅಧ್ಯಕ್ಷ  ಮಾತ್ರ ತಿಂಗಳಿಗೆ  ರೂ2.40 ಲಕ್ಷ ವೇತನ ಮತ್ತಿತರ ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ತಿಳಿಸಿದರು.

ವಿವಿಧ ಸಾವಯವ ಕೃಷಿ ಪರಿವಾರಗಳ ಪದಾಧಿಕಾರಿಗಳಾದ ಗುರುರಾಜ್, ಈರಣ್ಣ, ಕೆ.ಜಿ. ಈಶ್ವರಪ್ಪ, ಕೆ. ಉಮಾಪತಿ, ಎ. ನಾಗರಾಜ, ಬಿ.ಎನ್. ನಾಗರಾಜ, ಟಿ. ಕೃಪ, ಜಿ.ಎಂ. ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.