ADVERTISEMENT

ಶೀಘ್ರದಲ್ಲೇ 24 ಗಂಟೆಯೂ ಬಸ್‌ ಕಾರ್ಯಾಚರಣೆ: ಸಚಿವ ಲಕ್ಷ್ಮಣ ಸವದಿ

ಲಾಕ್‌ಡೌನ್‌ನಿಂದ ಸಾರಿಗೆ ನಿಗಮಗಳಿಗೆ ₹ 1,800 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:01 IST
Last Updated 27 ಮೇ 2020, 17:01 IST
ಕೋವಿಡ್‌–19 ಮೊಬೈಲ್‌ ಫಿವರ್‌ ಕ್ಲಿನಿಕ್‌ ಬಸ್‌ಗೆ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಅವರು ದಾವಣಗೆರೆಯ ಬಸ್‌ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವ ಬೈರತಿ ಬಸವರಾಜ, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌, ಮೇಯರ್‌ ಬಿ.ಜಿ. ಅಜಯಕುಮಾರ್‌ ಇದ್ದಾರೆ.
ಕೋವಿಡ್‌–19 ಮೊಬೈಲ್‌ ಫಿವರ್‌ ಕ್ಲಿನಿಕ್‌ ಬಸ್‌ಗೆ ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಅವರು ದಾವಣಗೆರೆಯ ಬಸ್‌ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವ ಬೈರತಿ ಬಸವರಾಜ, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌, ಮೇಯರ್‌ ಬಿ.ಜಿ. ಅಜಯಕುಮಾರ್‌ ಇದ್ದಾರೆ.   

ದಾವಣಗೆರೆ: ‘ಕೋವಿಡ್‌ನಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಆಗಿರುವ ಹಾನಿಯನ್ನು ತಗ್ಗಿಸಲು ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಷ್ಟದಿಂದ ಹೊರಗೆ ಬರಲು ಹವಾನಿಯಂತ್ರಿತ ಸೇರಿ ವಿವಿಧ ಬಸ್‌ಗಳ ಸೇವೆಯನ್ನು ದಿನದ 24 ಗಂಟೆಗೂ ಶೀಘ್ರದಲ್ಲೇ ವಿಸ್ತರಿಸಲಾಗುವುದು’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನೆ ನಡೆಸಿದ ಸವದಿ, ‘ಲಾಕ್‌ಡೌನ್‌ನಿಂದ ನಾಲ್ಕು ನಿಗಮಗಳಿಗೆ ಈ ತಿಂಗಳವರೆಗೆ ಒಟ್ಟು ₹ 1,800 ಕೋಟಿ ನಷ್ಟವಾಗಿದೆ. ಅಧಿಕಾರಿ ಹಾಗೂ ನೌಕರರ ಸಂಬಳಕ್ಕೆ ₹ 326 ಕೋಟಿ ಅಗತ್ಯವಿದೆ. ಹೀಗಾಗಿ ನಿಗಮಗಳ ಆಡಳಿತಾತ್ಮಕ ವೆಚ್ಚವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘54 ಜನ ಕೂರುವ ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಎಸಿ ಬಸ್‌ಗಳ ಸಂಚಾರವಿಲ್ಲ. ಅಂತರರಾಜ್ಯ ಓಡಾಟ ಇಲ್ಲ. ಹಗಲಿನಲ್ಲಿ ಮಾತ್ರ ಬಸ್‌ ಸಂಚರಿಸುತ್ತಿರುವುದರಿಂದ ಆದಾಯ ಕುಂಠಿತಗೊಂಡಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಆದಾಯ ಹೆಚ್ಚಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ ರೆಡ್ಡಿ, ‘ಪ್ರತಿ ಕಿ.ಮೀ.ಗೆ ₹ 34 ಖರ್ಚು ಬರುತ್ತಿದೆ. ಸದ್ಯ ₹ 24 ಆದಾಯ ಬರುತ್ತಿದ್ದು, ₹ 12 ನಷ್ಟ ಸಂಭವಿಸುತ್ತಿದೆ. ಅಂತರ ಕಾಯ್ದುಕೊಳ್ಳುತ್ತಿರುವುದು ಹಾಗೂ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್‌ ಓಡಿಸುತ್ತಿರುವುದರಿಂದ ₹ 1 ಕೋಟಿ (ಶೇ 20) ಆದಾಯ ಬರುತ್ತಿದೆ. ಶಾಲಾ–ಕಾಲೇಜು ಆರಂಭಗೊಂಡರೆ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಇನ್ನಷ್ಟು ಬಸ್‌ಗಳ ಸಂಚಾರ ಹೆಚ್ಚಿಸಿದರೆ ನಿರ್ವಹಿಸುವುದು ಕಷ್ಟವಾಗಲಿದೆ’ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್‌. ಹೆಬ್ಬಾಳ್‌, ‘ಅಂತರರಾಜ್ಯ ಮತ್ತು ಬೆಂಗಳೂರಿಗೆ ತೆರಳುವ ಬಸ್‌ಗಳಿಂದ ಲಾಭ ಬರುತ್ತಿದೆ. ನಿಗಮದಲ್ಲಿ ಸಾಕಷ್ಟು ಜನ ಹೊರ ಗುತ್ತಿಗೆ ನೌಕರರು ಇದ್ದಾರೆ. ಅಗತ್ಯವಿರುವ ಇಲಾಖೆಗಳಿಗೆ ಇವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸಬಹುದು’ ಎಂದು ಹೇಳಿದರು.

ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ, ಜಾತ್ರೆ ಮತ್ತು ಇತರೆ ಉತ್ಸವದಂತಹ ವಿಶೇಷ ಬಸ್ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಹಾನಿಯನ್ನು ಭರಿಸಬಹುದು ಎಂದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 120 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ನೂತನ ಬಸ್‌ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಳೆಯ ಟೆಂಡರ್‌ದಾರರು ದರ ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಹೊಸ ಟೆಂಡರ್ ಕರೆಯುವಂತೆ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರಿಗೆ ಸಚಿವರು ಸೂಚಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಿಸಲು ಜಾಗ ಹುಡುಕಬೇಕು. ಮಾಯಕೊಂಡದಲ್ಲಿ ಜಾಗವಿದ್ದು, ಡಿಪೊ ನಿರ್ಮಿಸಬೇಕು. ಸಂತೇಬೆನ್ನೂರು, ತ್ಯಾವಣಗಿಯಲ್ಲಿ ಬಸ್‌ನಿಲ್ದಾಣ ನಿರ್ಮಿಸಬೇಕು. ₹ 14 ಕೋಟಿ ವೆಚ್ಚದಲ್ಲಿ ಹರಿಹರ ಬಸ್‌ನಿಲ್ದಾಣ ಉನ್ನತೀಕರಿಸಲು ಪ್ರವಸ್ತಾವ ಸಲ್ಲಿಸಲಾಗಿದೆ. ಅನೇಕ ಹಳ್ಳಿಗಳಿಗೆ ಹೊಸದಾಗಿ ಬಸ್‌ ಸಂಚಾರ ಆರಂಭಿಸಬೇಕು’ ಎಂದು ಹೇಳಿದರು.

ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್. ಮನ್ನಿಕೇರಿ, ನಿಗಮಗಳಿಗೆ ಆಗಿರುವ ಹಾನಿಯನ್ನು ತಗ್ಗಿಸುವ ಬಗ್ಗೆ ಸಲಹೆಗಳನ್ನು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಮೇಯರ್‌ ಬಿ.ಜಿ. ಅಜಯಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಾಜರಿದ್ದರು.

ಕೋವಿಡ್‌ ವಾರಿಯರ್‌ಗಳಿಗೆ ಅಭಿನಂದನೆ: ಕೋವಿಡ್‌ ಕರ್ತವ್ಯ ನಿರ್ವಹಿಸಿದ ಸಾರಿಗೆ ಸಂಸ್ಥೆಯ ವಾಹನ ಚಾಲಕರು ಮತ್ತು ನಿರ್ವಾಹಕರ ಮೇಲೆ ಸಚಿವರಾದ ಲಕ್ಷ್ಮಣ ಸವದಿ, ಬೈರತಿ ಬಸವರಾಜ ಮತ್ತು ಸಂಸದ ಸಿದ್ದೇಶ್ವರ ಅವರು ಪುಷ್ಪವೃಷ್ಟಿ ಮಾಡುವ ಮೂಲಕ ಅಭಿನಂದಿಸಿದರು.

ಫಿವರ್‌ ಕ್ಲಿನಿಕ್‌ ಬಸ್‌ಗೆ ಚಾಲನೆ
ಜಿಲ್ಲಾಡಳಿತ ಹಾಗೂ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಆರಂಭಿಸಿರುವ ಜ್ವರ ತಪಾಸಣೆ ಮತ್ತು ಕೋವಿಡ್‌–19 ಪರೀಕ್ಷೆಗಾಗಿ ಗಂಟಲಿನ ದ್ರವದ ಮಾದರಿ ಸಂಗ್ರಹಿಸುವ ಸೌಲಭ್ಯವಿರುವ ಮೊಬೈಲ್‌ ಫಿವರ್‌ ಕ್ಲಿನಿಕ್‌ ಬಸ್‌ನ ಸೇವೆಗೆ ಸಚಿವ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿಸಿದರು.

ಬಸ್‌ನ ಮುಂಭಾಗದಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರು ಇರಲಿದ್ದಾರೆ. ಮಂಚ, ಟೇಬಲ್‌, ಕೈ ತೊಳೆಯಲು ಬೇಸಿನ್‌, ಹ್ಯಾಂಡ್‌ ಸ್ಯಾನಿಟೈಸರ್‌ ಸೌಲಭ್ಯಗಳಿವೆ. ಬಸ್‌ನ ಮುಂಭಾಗದಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಹಿಂಭಾಗದಲ್ಲಿ ರೋಗಿಗಳ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುತ್ತಾರೆ. ಹಿಂಭಾಗದಲ್ಲೂ ಕೈ ತೊಳೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಈ ಮೊಬೈಲ್‌ ಫಿವರ್‌ ಕ್ಲಿನಿಕ್‌ ಬಸ್‌ನಲ್ಲಿ ವೈದ್ಯರ ತಂಡ ಗ್ರಾಮೀಣ ಭಾಗದಲ್ಲಿ ಸಂಚರಿಸಿ ನಾಗರಿಕರ ಆರೋಗ್ಯ ಪರೀಕ್ಷೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.