ADVERTISEMENT

25ಕ್ಕೆ ಚನ್ನಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:25 IST
Last Updated 23 ಸೆಪ್ಟೆಂಬರ್ 2011, 6:25 IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ವೆಂಕಟೇಶ್ವರಪುರದಲ್ಲಿ ಸೆ. 25ರಂದು ಚನ್ನಗಿರಿ ತಾಲ್ಲೂಕುಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸದಾಶಿವಪ್ಪ ಶ್ಯಾಗಲೆ ತಿಳಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನವನ್ನು ಸಚಿವ ಎಸ್.ಎ. ರವೀಂದ್ರನಾಥ್ ಉದ್ಘಾಟಿಸುವರು. ಸಮ್ಮೇಳನದಲ್ಲಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಬಸವರಾಜ ನಾಯ್ಕ ಮತ್ತಿತರರ ಗಣ್ಯರುಪಾಲ್ಗೊಳ್ಳುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಉಡುಪಿ ಹಾಗೂ ಒಂದೆರೆಡು ಜಿಲ್ಲೆಗಳನ್ನು ಹೊರತುಪಡಿಸಿ, ದಾವಣಗೆರೆ ಜಿಲ್ಲಾ ಕಸಾಪ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲ್ಲೂಕುಮಟ್ಟದಲ್ಲಿ 13ನೇ ಸಮ್ಮೇಳನ ನಡೆಸುತ್ತಿರುವುದು ಕಸಾಪಕ್ಕೆ ಹೆಮ್ಮೆಯ ಸಂಗತಿ ಎಂದರು.

ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ `ಕನ್ನಡಭವನ~ದ ಕೆಲ ಕಾಮಗಾರಿ ಮುಕ್ತಾಯಗೊಂಡಿದ್ದು, ನವೆಂಬರ್ ಮೊದಲ ವಾರದಲ್ಲಿ ಭವನದ ನೆಲಮಾಳಿಗೆ ಸಭಾಂಗಣ, ಕಚೇರಿ, ಗ್ರಂಥಾಲಯ, ವಾಚನಾಲಯ ಉದ್ಘಾಟಿಸಲಾಗುವುದು. ಭವನಕ್ಕೆ ಇದುವರೆಗೆ ರೂ90ಲಕ್ಷ ಖರ್ಚಾಗಿದೆ. ್ಙ  50ಲಕ್ಷ ಅನುದಾನ ಬರಬೇಕಾಗಿದೆ ಎಂದು ಸದಾಶಿವಪ್ಪ ವಿವರಿಸಿದರು.

ಜಿಲ್ಲೆಯ ಹೊನ್ನಾಳಿ, ಜಗಳೂರು ಕಸಾಪ ಘಟಕಗಳು ಅಸಹಕಾರ ನೀಡುತ್ತಿದ್ದು, ಆ ಭಾಗದಲ್ಲಿ ಸಾಹಿತ್ಯಕ ಚಟುವಟಿಕೆ ಕೈಗೊಳ್ಳಲಾಗುತ್ತಿಲ್ಲ. ಆದರೆ, ಜಿಲ್ಲೆಯ ಇತರ ಕಸಾಪ ಘಟಕಗಳು ತಮಗೆ ಬೆಂಬಲ, ಸಹಕಾರ ನೀಡುತ್ತಿರುವುದರಿಂದ ಜಿಲ್ಲಾ ಕಸಾಪ ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ ಎಂದು ಸ್ಪಷ್ಟಪಡಿಸಿದರು.

ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್. ಶಂಕರಪ್ಪ ಮಾತನಾಡಿ, ಸುಮಾರು ರೂ5ಲಕ್ಷ ವೆಚ್ಚದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ. ವಾಮದೇವಪ್ಪ, ಎಲ್. ನಾಗರಾಜು, ಸಾಲಿಗ್ರಾಮ ಗಣೇಶ ಶೆಣೈ, ರಾಮಚಂದ್ರಪ್ಪ, ಕೆ.ಸಿ. ರುದ್ರಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.