ADVERTISEMENT

ಹುತಾತ್ಮ ರೈತ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಿ: ಕೆಪಿಸಿಸಿ ವಕ್ತಾರ ಡಿ.ಬಸವರಾ

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 4:40 IST
Last Updated 21 ನವೆಂಬರ್ 2021, 4:40 IST
ಡಿ. ಬಸವರಾಜ್
ಡಿ. ಬಸವರಾಜ್   

ದಾವಣಗೆರೆ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲಿನ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು, ಹುತಾತ್ಮ ರೈತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆಗ್ರಹಿಸಿದರು.

‘ಮುಷ್ಕರನಿರತ ರೈತರನ್ನು ಖಲಿಸ್ತಾನಿ ಉಗ್ರರು, ದೇಶದ್ರೋಹಿಗಳು, ನಕಲಿ ರೈತರು ಎಂದು ಎಂದು ಕರೆದಿದ್ದ ಬಿಜೆಪಿ ನಾಯಕರು ರೈತರ ಕ್ಷಮೆ ಕೇಳಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪಂಚ ರಾಜ್ಯಗಳ ಚುನಾವಣೆಯ ಉದ್ದೇಶದಿಂದ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಕೈಬಿಟ್ಟಿದ್ದಾರೆಯೇ ಹೊರತು ರೈತರ ಮೇಲಿನ ಗೌರವದಿಂದಲ್ಲ. ರೈತರು, ಬಡವರು, ಕಾರ್ಮಿಕರು, ಹಿಂದುಳಿದವರ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕನಿಷ್ಠ ಕಾಳಜಿಯೂ ಇಲ್ಲ’ ಎಂದು ಎಂದು ಟೀಕಿಸಿದರು.

ADVERTISEMENT

‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಜಾರಿಗೊಳಿಸಬೇಕು. ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಲು ಶಾಶ್ವತ ಆಯೋಗವನ್ನು ಸರ್ಕಾರ ರಚಿಸಬೇಕು. ಆ ಆಯೋಗದಲ್ಲಿ ರೈತರ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಕೃಷಿ ಆರ್ಥಿಕ ತಜ್ಞರನ್ನು ಕೃಷಿ ಆಯೋಗದ ಸದಸ್ಯರನ್ನಾಗಿ ನೇಮಿಸಬೇಕು. ಕೃಷಿ ಹಂಗಾಮಿನಲ್ಲಿ ರೈತರ ಬೆಳೆಗಳು ಕಟಾವಿಗೆ ಬರುವ ಮುನ್ನ ಕನಿಷ್ಠ‌ ಬೆಂಬಲ ಬೆಲೆಯನ್ನು ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ದೇಶದಲ್ಲಿ ಜಾರಿಗೆ ತಂದಿರುವ ಜಿಎಸ್‌ಟಿ ಕಾಯ್ದೆ ಅವೈಜ್ಞಾನಿಕವಾಗಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗುತ್ತಿದ್ದರೂ ರಾಜ್ಯಕ್ಕೆ ಸಲ್ಲಬೇಕಾದ ಪಾಲು ಸಿಗುತ್ತಿಲ್ಲ. ನ್ಯಾಯಸಮ್ಮತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಮಹಾನಗರಪಾಲಿಕೆ ಸದಸ್ಯ ಕೆ. ಚಮನ್‍ಸಾಬ್‍ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಗದ ಜನರಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದರು. ಇದೀಗ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ ಅವರಿಗೆ ಕಾಪಾಳ ಮೋಕ್ಷವಾಗಿದೆ. ದೇಶದ ಜನರು ಮೋದಿಯವರನ್ನು ಇದೀಗ ಗೌರವಿಸುತ್ತಿಲ್ಲ’ ಎಂದು ಟೀಕಿಸಿದರು.

ನಗರಪಾಲಿಕೆ ಸದಸ್ಯ ಮಂಜುನಾಥಗೌಡ ಗಡಿಗುಡಾಳ್‌, ಮುಖಂಡರಾದ ಜಗದೀಶ್, ಆರ್.ಬಿ.ಝಡ್ ಬಾಷಾ, ದಾದಾಪೀರ್, ಮಹೇಶ್, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.