ADVERTISEMENT

30 ವರ್ಷದಿಂದ ನಡೆದಿದೆ ಕಟ್ಟಿಗೆ ಮಾರುವ ಕಾಯಕ

ಆಶ್ರಯಕ್ಕೆ ಯಾರನ್ನೂ ಬೇಡಲ್ಲ ಈ ಬದ್ಲಿಬಾಯಿ ಅಜ್ಜಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 6:36 IST
Last Updated 19 ಜೂನ್ 2018, 6:36 IST
ಕಟ್ಟಿಗೆ ಮಾರಾಟ ಮಾಡಲು ಹೊರಟಿರುವ ಬದ್ಲಿಬಾಯಿ
ಕಟ್ಟಿಗೆ ಮಾರಾಟ ಮಾಡಲು ಹೊರಟಿರುವ ಬದ್ಲಿಬಾಯಿ   

ಹರಪನಹಳ್ಳಿ: ಸ್ವಾಭಿಮಾನಕ್ಕೆ ವಯಸ್ಸಿನ ಹಂಗಿಲ್ಲ. ಮೂವತ್ತಾದರೇನು ಎಂಬತ್ತಾದರೇನು? ಮೊತ್ತೊಬ್ಬರಿಗೆ ಕೈಯೊಡ್ಡದಂತೆ ಬದುಕುವ ಛಲ ಇದ್ದರೆ ವೃದ್ಧಾಪ್ಯ ಪರಿಗಣನೆಗೆ ಬರುವುದಿಲ್ಲ ಎಂಬ ಮಾತಿಗೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉದಗಟ್ಟಿ ದೊಡ್ಡ ತಾಂಡಾದ ಇಳಿ ವಯಸ್ಸಿನ ಅಜ್ಜಿಯೇ ಸಾಕ್ಷಿ.

ಅಜ್ಜಿ ಹೆಸರು ಬದ್ಲಿಬಾಯಿ. ಅವರಿಗೀಗ ಬರೊಬ್ಬರಿ 81 ವರ್ಷ ವಯಸ್ಸು. ನಿತ್ಯದ ಜೀವನ ಸಾಗಿಸಲು ಉರುವಲು ಕಟ್ಟಿಗೆಯೇ ಇವರಿಗೆ ಜೀವನಾಧಾರ. ಪ್ರತಿದಿನ 25 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಕಟ್ಟಿಗೆ ಮಾರಿದರೆ ಅಜ್ಜಿಗೆ ಕೂಲಿ ಸಿಗುತ್ತದೆ. ಸುಮಾರು ನಾಲ್ಕು ದಶಕಗಳಿಂದ ಈ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಉದಗಟ್ಟಿ ದೊಡ್ಡ ತಾಂಡಾ (ಬಾಪೂಜಿನಗರ) ಬದ್ಲಿಬಾಯಿಯ ತವರೂರು. ಗಂಡನ ಮನೆ ಮಜ್ಜಿಗೇರೆ ತಾಂಡಾ. ಪತಿ ರಾಮಾನಾಯ್ಕ ತೀರಿಕೊಂಡು 18 ವರ್ಷಗಳೇ ಕಳೆದಿವೆ. ಇದ್ದವೊಬ್ಬ ಮಗಳನ್ನೂ ದೂರದೂರದ ತಾಂಡಾವೊಂದಕ್ಕೆ ಮದುವೆ ಮಾಡಿಕೊಡಲಾಗಿದೆ. ಗಂಡನ ಮನೆಯ ಕಡುಬಡತನದ ಸಂಕೋಲೆಯಲ್ಲಿ ಸಿಲುಕಿರುವ ಮಗಳಿಗೆ ತಾಯಿ ಕ್ಷೇಮ ವಿಚಾರಿಸಲು ಆಗುತ್ತಿಲ್ಲ ಎನ್ನುತ್ತಾರೆ ಬದ್ಲಿಬಾಯಿ ಅಕ್ಕಪಕ್ಕದ ಮನೆಯವರು.

ADVERTISEMENT

ಕುಡಿಯುವ ನೀರು, ರೊಟ್ಟಿ ಗಂಟು ಕಟ್ಟಿಕೊಂಡು ಮನೆಯಿಂದ ಹೊರಡುವ ಬದ್ಲಿಬಾಯಿ ರಸ್ತೆಯ ಬದಿ, ಹೊಲವಾರಿಯಲ್ಲಿ ಬಿದ್ದಿರುವ ಒಣಗಿದ ಕಟ್ಟಿಗೆ ಸಂಗ್ರಹಿಸುತ್ತಾರೆ. ನಂತರ ಕಟ್ಟಿಗೆ ಜೋಡಿಸಿಕೊಂಡು ಹರಪನಹಳ್ಳಿ ಪಟ್ಟಣಕ್ಕೆ ಸಮೀಪದ ದಾರಿಯಿಂದ ಪ್ರಯಾಣ ಬೆಳೆಸುತ್ತಾರೆ.

ದಾರಿ ಮಧ್ಯೆ ಚಕ್ಕಡಿ, ಟ್ರ್ಯಾಕ್ಟರ್ ಬರುತ್ತಿದ್ದರೂ ಯಾರಿಗೂ ಕೈ ಮಾಡಿ ಸಹಾಯ ಬೇಡಲ್ಲ. ಸುಸ್ತು ಅನಿಸಿದರೆ ರಸ್ತೆ ಬದಿಯ ನೆರಳಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯುತ್ತಾರಷ್ಟೆ. ಚಳಿ, ಮಳೆ, ಬಿಸಿಲು ಯಾವುದು ಈ ಅಜ್ಜಿಗೆ ಲೆಕ್ಕವಿಲ್ಲ. ಪಟ್ಟಣಕ್ಕೆ ಹೋಗಿ ಕಟ್ಟಿಗೆ ಮಾರಾಟ ಮಾಡಿ ಬರುವ ₹ 20-30 ರೂಪಾಯಿ ಪಡೆದ ಮೇಲೆ ಮರಳಿ ಗೂಡು ಸೇರುವುದು ಕಾಲ್ನಡಿಗೆಯ ಮೂಲಕವೇ.

ಮನೆಯೇ ಕಟ್ಟಿಗೆ ಸಂಗ್ರಹದ ಗೂಡು: ಬದ್ಲಿಬಾಯಿ ಮನೆ ಪ್ರವೇಶಿಸಿದರೆ ಕಟ್ಟಿಗೆ ರಾಶಿ ಬಿಟ್ಟರೆ ಅಡುಗೆ ಸಾಮಗ್ರಿ, ಬೆರಳಿಣಿಕೆಯಷ್ಟು ಪಾತ್ರೆಗಳು, ಎರಡು ಮೂರು ಬಟ್ಟೆಗಳು, ಹಾಸಿಗೆಗಳು ಮಾತ್ರ ಕಾಣಸಿಗುತ್ತವೆ. ಸಂಗ್ರಹಿಸಿದ ಕಟ್ಟಿಗೆ ಯಾರಿಗೂ ಸಿಗಬಾರದು ಮತ್ತು ಮಳೆಗೆ ಕಟ್ಟಿಗೆ ನೆನೆಯಬಾರದು ಎಂಬ ಉದ್ದೇಶ ಅಜ್ಜಿಯದ್ದು. ಮನೆ ತುಂಬ ಕಟ್ಟಿಗೆ ತುಂಬಿ ಅದನ್ನೇ ಆಸ್ತಿಯಾಗಿಸಿಕೊಂಡಿರುವ ಬದ್ಲಿಬಾಯಿ ಮನೆ ಬಾಗಿಲಿಗೆ ಎರಡು ಗಟ್ಟಿಮುಟ್ಟಾದ ಕೀಲಿಕೈ ಹಾಕಿಸಿದ್ದಾರೆ. ಅದಕ್ಕೆ ದಪ್ಪದ ಬಟ್ಟೆ ಕಟ್ಟಿ ಭದ್ರಪಡಿಸಿದ್ದಾರೆ.

ವಾಸಿಸಲು ಸ್ವಂತ ಮನೆಯಿಲ್ಲ: ಬದ್ಲಿಬಾಯಿ ಸದ್ಯ ವಾಸಿಸುತ್ತಿರುವುದು ಸ್ವಂತ ಮನೆಯಲ್ಲಲ್ಲ. ಅವರ ಕಷ್ಟ ನೋಡಿ ತಾಂಡಾದ ಸಂಬಂಧಿಕರೊಬ್ಬರು ತಮಗೆ ಬಂದಿದ್ದ ಆಶ್ರಯ ಮನೆಯಲ್ಲಿ ವಾಸ ಮಾಡಲು ಅನುಕೂಲ ಕಲ್ಪಿಸಿದ್ದಾರೆ. ಅಜ್ಜಿಯ ಹೆಸರಲ್ಲಿ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಇವೆ. ಇಷ್ಟು ಬಿಟ್ಟರೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಪ್ರತಿ ತಿಂಗಳು ಬರುವ ವೃದ್ಧಾಪ್ಯ ವೇತನ, ಪಡಿತರದಿಂದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಅಜ್ಜಿ ಬಳಿ ₹ 2 ಸಾವಿರ ನಗದು ಇದೆ. ಯಾವುದೇ ಬ್ಯಾಂಕ್ ಖಾತೆ ಇಲ್ಲ. ಇಷ್ಟು ಬಿಟ್ಟರೆ ಯಾವುದೇ ಸರ್ಕಾರಿ ಯೋಜನೆಯ ಲಾಭ ಬದ್ಲಿಬಾಯಿಗೆ ಸಿಕ್ಕಿಲ್ಲ.

ಸ್ವಾಭಿಮಾನದ ಮಾದರಿ ಈ ಅಜ್ಜಿ

‘ನಾನು ಚಿಕ್ಕವನಿದ್ದ ಆಗಿನಿಂದಲೂ ಬದ್ಲಿಬಾಯಿ ಕಟ್ಟಿಗೆ ಮಾರಾಟ ಮಾಡುತ್ತಿದ್ದಾಳೆ. ಬರುವ ಹಣದಲ್ಲೇ ₹ 10 ರೂಪಾಯಿ ಬಸ್, ಟೆಂಪೊಗೆ ನೀಡಿದರೆ ಹೇಗೆ ಎಂದು ಪಟ್ಟಣದಿಂದ ಮತ್ತೆ ಕಾಲ್ನಡಿಗೆಯಲ್ಲೇ ಮನೆಗೆ ಮರಳುತ್ತಾಳೆ. ದಾರಿಯಲ್ಲಿ ಸಿಗುವ ಬೈಕ್ ಸವಾರರು ಮನೆಗೆ ಬಿಡುತ್ತೇನೆ ಬಾರಮ್ಮ ಎಂದರೂ ಅದನ್ನು ನಯವಾಗಿಯೇ ತಿರಸ್ಕರಿಸುತ್ತಾಳೆ. ಬದ್ಲಿಬಾಯಿಯ ಈ ಇಳಿ ವಯಸ್ಸಿನ ಸ್ವಾಭಿಮಾನ ಸಮಾಜಕ್ಕೆ ಮಾದರಿ’ ಎನ್ನುತ್ತಾರೆ ಉದಗಟ್ಟಿ ತಾಂಡಾ ನಿವಾಸಿ ಡಿ.ರಾಜು ನಾಯ್ಕ.

ಮೊದಲು 40 ಕೆ.ಜಿ.ವರೆಗೆ ಕಟ್ಟಿಗೆ ಹೊತ್ತು ಸಾಗುತ್ತಿದ್ದೆ. ಆಗಿನ ಶಕ್ತಿ ಈಗಿಲ್ಲ. ನನಗೆ ಸರಿಯಾಗಿ ಕಣ್ಣು ಕಾಣಲ್ಲ. ಕಟ್ಟಿಗೆ ಮಾರಾಟ ಮಾಡಿದ ಹಣದಲ್ಲೇ ಮಾಡಿ ಜೀವನ ನಡೆಸುತ್ತಿದ್ದೇನೆ. ತುತ್ತು ಊಟಕ್ಕೆ ಮತ್ತೊಬ್ಬರಿಗೆ ಕೈಒಡ್ಡುವ ಜಾಯಮಾನ ನನ್ನದಲ್ಲ. ಸರ್ಕಾರದವರು ನನಗೆ ಆಶ್ರಯ ಮನೆ ನೀಡಬೇಕು
– ಬದ್ಲಿಬಾಯಿ, ಕಟ್ಟಿಗೆ ಮಾರಾಟ ಮಾಡುವ ಮುದುಕಿ.

-ಪ್ರಹ್ಲಾದಗೌಡ ಗೊಲ್ಲಗೌಡರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.